ದಕ್ಷಿಣಕನ್ನಡ : ಕರಾವಳಿಯ ಪ್ರಮುಖ ಮನೋರಂಜನಾ ಮತ್ತು ಸಾಂಪ್ರದಾಯಿಕ ಕ್ರೀಡೆ ಎಂದು ಗುರುತಿಸಿಕೊಂಡಿರುವ ಕಂಬಳ ಕ್ರೀಡೆಯನ್ನು ಸಾಮಾಜಿಕ ಮತ್ತು ಇತರ ಸೇವಾ ಮನೋಭಾವದ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಸಂಸ್ಥೆಯೊಂದು ಇದೇ ಮೊದಲ ಬಾರಿಗೆ ಆಯೋಜಿಸಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಸಬ್ ಜ್ಯೂನಿಯರ್ ಹಗ್ಗ ಮತ್ತು ನೇಗಿಲು ವಿಭಾಗದ ‘ರೋಟರಿ ಕಂಬಳ ಕೂಟ’ ಆಯೋಜಿಸಿದೆ.
ಬಂಟ್ವಾಳದ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆ ಯಲ್ಲಿ ಈ ಕಂಬಳ ನಡೆದಿದೆ. ಅಂತರರಾಷ್ಟ್ರೀಯ ಸಂಘಟನೆಯಾದ ರೋಟರಿ ಕ್ಲಬ್ ಇದೇ ಮೊದಲ ಬಾರಿಗೆ ತುಳುನಾಡಿನ ಸಾಂಪ್ರದಾಯಿಕ ಕಂಬಳವನ್ನು ನಡೆಸಿರುವುದು ಭಾರೀ ಪ್ರಶಂಸೆಗೂ ಪಾತ್ರವಾಗಿದೆ. ಮುಖ್ಯವಾಗಿ ಈ ಕಂಬಳದಲ್ಲಿ ಸಬ್ ಜ್ಯೂನಿಯರ್ ಮಟ್ಟದ ಕೋಣಗಳನ್ನು ಓಡಿಸಲಾಗಿತ್ತು. ಹೆಚ್ಚಾಗಿ ದೊಡ್ಡ ಕೋಣಗಳನ್ನು ಕಂಬಳದಲ್ಲಿ ಓಡಿಸಲಾಗುತ್ತಿದ್ದು, ಸಣ್ಣ ಕೋಣಗಳಿಗೆ ಪ್ರಮುಖ ಕಂಬಳಗಳಲ್ಲಿ ಅವಕಾಶಗಳು ಸಿಗುವುದೇ ಇಲ್ಲ. ಇದೇ ಕಾರಣಕ್ಕಾಗಿ ಈ ಕಂಬಳದಲ್ಲಿ ಕೇವಲ ಸಣ್ಣ ಕೋಣಗಳಿಗೆ ಮಾತ್ರ ಅವಕಾಶವನ್ನು ನೀಡಲಾಗಿತ್ತು.
ಕಂಬಳದಲ್ಲಿ ಭಾಗವಹಿಸಿದ ಎಲ್ಲರಿಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.
ಸಬ್ ಜ್ಯೂನಿಯರ್ ನೇಗಿಲು ವಿಭಾಗದಲ್ಲಿ 79 ಜೊತೆ ಮತ್ತು ಹಗ್ಗ ವಿಭಾಗದಲ್ಲಿ 6 ಜೊತೆ ಸೇರಿದಂತೆ ಒಟ್ಟು 85 ಜೋಡಿ ಮರಿ ಕೋಣಗಳು ಪಾಲ್ಗೊಂಡು ಗಮನ ಸೆಳೆಯಿತು. ಕರಾವಳಿ ಭಾಗದಲ್ಲಿ ಕಂಬಳ ಕ್ರೀಡೆಯನ್ನು ಕಂಬಳ ಸಮಿತಿ ಆಯೋಜಿಸುತ್ತಿದ್ದು, ರೋಟರಿ ಕ್ಲಬ್ ನಡೆಸಿದ ಈ ಕಂಬಳಕ್ಕೆ ಕಂಬಳ ಸಮಿತಿಯೂ ಕೈಜೋಡಿರುವುದು ವಿಶೇಷವಾಗಿತ್ತು.