ದಕ್ಷಿಣಕನ್ನಡ: ಮಾವಿನ ಹಣ್ಣಿನ ಸೀಸನ್ ಮುಗಿದಂತೆ ಇದೀಗ ಮಾವಿನ ಕಾಯಿಗಳ ಸೀಸನ್ ಆರಂಭಗೊಂಡಿದೆ. ಹೆಚ್ಚಾಗಿ ಉಪ್ಪಿನಕಾಯಿ ಹಾಕಲು ಈ ಮಾವಿನಕಾಯಿಗಳನ್ನು ಬಳಸಲಾಗುತ್ತದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದೀಗ ತಿರುಪತಿಯ ಮಾವಿನಕಾಯಿಗಳದ್ದೇ ಕಾರುಬಾರು ಆರಂಭವಾಗಿದ್ದು, ತೋತಾಪುರಿ, ಮಿಡಿ ಮಾವುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಟನ್ ಗಟ್ಟಲೆ ಮಾವಿನಕಾಯಿಗಳು ಜಿಲ್ಲೆಗೆ ಆಗಮಿಸುತ್ತಿದ್ದು, ಬಂದಷ್ಡೇ ವೇಗದಲ್ಲಿ ಅವುಗಳು ಮಾರಾಟವಾಗುತ್ತಿದೆ.
ಜಿಲ್ಲೆಯ ಎಲ್ಲಾ ತರಕಾರಿ ಅಂಗಡಿ ಮತ್ತು ರಸ್ತೆ ಬದಿಗಳಲ್ಲಿ ತಿರುಪತಿಯಿಂದ ಬರುವ ಇದೇ ಮಾವಿನಕಾಯಿಗಳ ರಾಶಿ ಕಂಡು ಬರುತ್ತಿದೆ. ಮಾವಿನ ಹಣ್ಣಿನ ಸೀಸನ್ ಮುಗಿಯುತ್ತಲೇ,ಮಾವಿನಕಾಯಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಮಾವಿನಕಾಯಿಗಳನ್ನು ಹೆಚ್ಚಾಗಿ ಉಪ್ಪಿನಕಾಯಿ ಮಾಡಲು ಬಳಸಿದರೆ, ಇನ್ನು ಕೆಲವು ಕಡೆಗಳಲ್ಲಿ ಈ ಕಾಯಿಗಳನ್ನು ಉಪ್ಪಿನ ನೀರಿನಲ್ಲಿಟ್ಟು, ಅದನ್ನು ಊಟದ ಜೊತೆಗೆ ಸೇವಿಸುತ್ತಾರೆ. ಮಾವಿನಕಾಯಿ ಚಟ್ನಿಗೂ ಈ ಕಾಯಿಗಳು ಬಳಕೆಯಾಗುತ್ತಿದ್ದು, ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ಈ ಕಾಯಿಗಳಿಗೆ ಭಾರೀ ಬೇಡಿಕೆಯೂ ಇದೆ.
ದಿನವೊಂದಕ್ಕೆ 10 ರಿಂದ 20 ಟನ್ ಮಾವಿನಕಾಯಿಗಳು ಮಾರಾಟವಾದ ದಿನಗಳೂ ಇದ್ದು, ಮಾವಿನಕಾಯಿಗಳಲ್ಲಿ ತಿರುಪತಿಯಿಂದ ಬರುವ ತೋತಾಪುರಿ ಮತ್ತು ಮಿಡಿ ಮಾವಿನಕಾಯಿಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನುತ್ತಾರೆ ಮಾವಿನಕಾಯಿಗಳ ಮಾರಾಟದಲ್ಲಿ ಕಳೆದ 20 ವರ್ಷಗಳಿಂದ ತೊಡಗಿಸಿಕೊಂಡಿರುವ ಕಡಬ ನಿವಾಸಿ ಇಬ್ರಾಹಿಂ. ತಿರುಪತಿಯಿಂದ ಬರುವ ಮಾವಿನಕಾಯಿಗಳು ಜಿಲ್ಲೆಯ ಎಲ್ಲಾ ಭಾಗದ ಜನರಿಗೆ ಸಿಗಲಿ ಎನ್ನುವ ಕಾರಣಕ್ಕೆ ಇಬ್ರಾಹಿಂ ಒಬ್ಬರೇ ಜಿಲ್ಲೆಯ ಸುಮಾರು ಐದಾರು ಕಡೆಗಳಲ್ಲಿ ಈ ಮಾವಿನಕಾಯಿಗಳನ್ನು ಮಾರಾಟ ಮಾಡುತ್ತಾರೆ.
ತಿರುಪತಿಯಿಂದ ಬರುವ ಈ ಮಾವಿನಕಾಯಿಗಳಿಗೆ ಜಿಲ್ಲೆಯಲ್ಲಿ ಒಳ್ಳೆಯ ಬೇಡಿಕೆಯಿದೆ. ಹೆಚ್ಚಾಗಿ ಈ ಕಾಯಿಗಳನ್ನು ಉಪ್ಪಿನಕಾಯಿಗೆ ಮಾತ್ರ ಬಳಕೆ ಮಾಡಲಾಗುತ್ತದೆ. ಫ್ರೆಶ್ ಮಾವಿನಕಾಯಿಗಳನ್ನು ಮಾತ್ರ ನಾವು ಗ್ರಾಹಕರಿಗೆ ನೀಡುತ್ತೇವೆ. ಇದರಿಂದ ಗ್ರಾಹಕರ ಮತ್ತು ನಮ್ಮ ಸಂಬಂಧವೂ ವೃದ್ಧಿಯಾಗುತ್ತದೆ. ಒಳ್ಳೆಯ ಮಾವಿನಕಾಯಿಗಳನ್ನು ಕೊಟ್ಟಲ್ಲಿ ಗ್ರಾಹಕ ನಮ್ಮನ್ನು ಹುಡುಕಿಕೊಂಡು ಬಂದು ಖರೀದಿ ಮಾಡುತ್ತಾನೆ ಎನ್ನುವ ಕಾರಣಕ್ಕೆ ವ್ಯವಹಾರದಲ್ಲಿ ಈ ರೀತಿಯ ನಿಯಮಗಳನ್ನು ಕಳೆದ 20 ವರ್ಷಗಳಿಂದ ಹಾಕಿಕೊಂಡು ಬರಲಾಗುತ್ತಿದೆ ಎನ್ನುತ್ತಾರೆ ಮಾವಿನಕಾಯಿ ವ್ಯಾಪಾರಿ ಇಬ್ರಾಹಿಂ.