ಉಡುಪಿಯ ಪೇಜಾವರ ಶ್ರೀಗಳು ಉಲ್ಲೇಖಿಸಿದಂತೆ ಪುತ್ತೂರಿನಲ್ಲಿ ದೊಡ್ಡ ಮಟ್ಟದ ಗೋ ಶಾಲೆ ನಿರ್ಮಾಣ ಮಾಡಲು ಸರಕಾರಕ್ಕೆ ಪತ್ರ ಬರೆಯಲಾಗುವುದು. ಜಾಗ ಕೊಟ್ಟರೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನಿಂದ ಗೋ ಶಾಲೆ ನಿರ್ಮಾಣ ಮಾಡಲಾಗುವುದು ಎಂದು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರು ಹೇಳಿದ್ದಾರೆ.
ಮುಕ್ರಂಪಾಡಿಯ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಕಾರ್ಯಾಲಯದಲ್ಲಿ ಮಾಧ್ಯಮದ ಜೊತೆ ಕೃತಜ್ಞತಾ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೀನಿವಾಸ ಕಲ್ಯಾಣೋತ್ಸವ ಸಂದರ್ಭ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಮುಂದಿನ ಶ್ರೀನಿವಾಸ ಕಲ್ಯಾಣೋತ್ಸವದ ಒಳಗಡೆ ಪುತ್ತೂರಿನಲ್ಲಿ ದೊಡ್ಡ ಗೋಶಾಲೆಯೊಂದನ್ನು ಮಾಡಬೇಕೆಂದು ಸಂದೇಶ ನೀಡಿದ್ದರು. ಅದಕ್ಕೆ ಪೂರಕವಾಗಿ ಅರುಣ್ ಕುಮಾರ್ ಪುತ್ತಿಲ ಅವರು ಈಗಾಗಲೇ ಸರಕಾರಕ್ಕೆ ಗೋ ಶಾಲೆ ಜಾಗಕ್ಕಾಗಿ ಸರಕಾರಕ್ಕೆ ಪತ್ರ ಬರೆಯಲಾಗುವುದು. ಬಳಿಕ ಜಾಗ ಕೊಟ್ಟರೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮೂಲಕ ಗೋ ಶಾಲೆ ನಿರ್ಮಾಣ ಮಾಡಲು ನಾವು ಸಿದ್ಧರಿದ್ದೇವೆ ಎಂದರು.
ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಅತ್ಯಂತ ಸೊಗಸಾಗಿ ಧಾರ್ಮಿಕ ಶ್ರದ್ಧೆಯ ಜೊತೆ ಮೇಲೈಸಿರುವುದು ಹಿಂದು ಸಮಾಜಕ್ಕೆ ದೊಡ್ಡ ಶಕ್ತಿಯನ್ನು ತುಂಬಿದೆ. ಅನೇಕ ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ಮಾಡಿರುವ ಸಂದರ್ಭದಲ್ಲಿ ಬೇರೆ ಬೇರೆ ರೀತಿಯ ಲೋಪಗಳು, ಒತ್ತಡಗಳು ಬರುವುದು ನಮಗೆಲ್ಲ ಗೊತ್ತಿದೆ. ಆದರೆ ಈ ಬಾರಿ ಶ್ರೀನಿವಾಸ ಕಲ್ಯಾಣೋತ್ಸವ ಮಾಡುವ ಸಂದರ್ಭ ಯಾವುದೇ ರೀತಿಯ ಒತ್ತಡಗಳು ಇರದೆ ಕಾರ್ಯಕ್ರಮ ವೈಭವದಿಂದ ನಡೆಯುವುದಕ್ಕೆ ನಮಗೆ ಶಕ್ತಿ ಕೊಟ್ಟಿರುವುದು ಮಹಾಲಿಂಗೇಶ್ವರ ಮತ್ತು ಶ್ರೀನಿವಾಸ ಎಂಬುದನ್ನು ನಾನು ಉಲ್ಲೇಖಿಸುತ್ತೇನೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಯಾವುದೇ ರೀತಿಯ ನ್ಯೂನ್ಯತೆ ಇಲ್ಲದೆ ಕಾರ್ಯಕ್ರಮ ಸುಲಲಿತವಾಗಿ ನಡೆದಿರುವುದು ಪುತ್ತೂರಿನ ಜನರ ಹೃದಯಶ್ರೀಮಂತಿಗೆ ಕಾರ್ಯಕ್ರಮದಲ್ಲಿ ಅನಾವರಣಗೊಂಡಿದೆ. ಭಕ್ತ ಸಮಿತಿಯ ಪರವಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದ ಅವರು ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು ಜೊತೆಯಾಗಿ ಎಲ್ಲವು ತನ್ನ ಮನೆಯ ಕಾರ್ಯಕ್ರಮ ಎಂದು ಕೆಲಸ ಮಾಡಿದ್ದಾರೆ. ಕಾರ್ಯಕರ್ತರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಕಾರ್ಯಕರ್ತರ ಭಾವನೆಗಳಿಗೆ ಪೂರಕವಾಗಿ ಹಿಂದು ಸಮಾಜ ಮತ್ತೆ ಶ್ರೀನಿವಾಸ ಕಲ್ಯಾಣೋತ್ಸವವನ್ನು ಮಾಡಬೇಕೆಂಬ ಬೇಡಿಕೆಯ ನಿಟ್ಟಿನಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಎಲ್ಲಾ ಶ್ರೀಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದ ಅವರು ಅಕ್ಷಯ ಕಾಲೇಜಿನ ಮತ್ತು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಸಹಕಾರ ನೀಡಿದ್ದಾರೆ ಎಂದರು.
ಕಾರ್ಯಕ್ರಮದ ಪೂರಕವಾಗಿ ಚಪ್ಪರ ಮುಹೂರ್ತದ ಸಂದರ್ಭ ಅತ್ಯಂತ ಎತ್ತರದ ಭಗವಧ್ವಜ ಹಾರಿಸಲಾಗಿತ್ತು. ಆ ಸಂದರ್ಭ ಗರುಡವೊಂದು ಭಗವಧ್ವಜ ಹಾರಿಸುವ ಸಂದರ್ಭ ಬಂದಿರುವುದು ಮಹಾಲಿಂಗೇಶ್ವರ ದೇವರಿಗೂ ವೆಂಕಟರಮಣ ದೇವರಿಗೂ ಬಹಳ ಹತ್ತಿರ ಸಂಬಂಧ ನಮಗೆಲ್ಲ ರೋಮಾಂಚನವನ್ನು ತಂದು ಕೊಟ್ಟಿದೆ. ಆ ಬಳಿಕ ನಮ್ಮೆಲ್ಲ ಕಾರ್ಯಗಳಾದ ಹೊರೆಕಾಣಿಕೆ, ಆಮಂತ್ರಣ ಪತ್ರ ವಿತರಣೆ, ದೇವರನ್ನು ಪುರಪ್ರವೇಶ ಮಾಡುವ ಸಂದರ್ಭದಲ್ಲಿ ಆದ ಬೆಳವಣಿಗೆ ಸ್ಪೂರ್ತಿಯಾಗಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಸುಮಾರು 75 ಸಾವಿರದಿಂದ 1ಲಕ್ಷದಷ್ಟು ಮಂದಿ ಅನ್ನಪ್ರಸಾದವನ್ನು ಸ್ವೀಕಾರ ಮಾಡಿ ಪುತ್ತೂರಿನ ಜನರು ಧರ್ಮ ಮತ್ತು ಧಾರ್ಮಿಕತೆಗೆ ಇರುವ ಸಂದೇಶ ನೀಡಿದ್ದಾರೆ. ಶ್ರೀನಿವಾಸ ಕಲ್ಯಾಣೋತ್ಸವದ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಾಮಾನ್ಯ ಭಕ್ತರಂತೆ ಪಾಲ್ಗೊಂಡು ಉತ್ತಮ ಸಹಕಾರ ನೀಡಿದ್ದಾರೆ. ಅದೇ ರೀತಿ ಮೆಸ್ಕಾಂ ಇಲಾಖೆ, ಅರಣ್ಯ, ನಗರಸಭೆ ಪೂರ್ಣ ಸಹಕಾರ ನೀಡಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಮಾದ್ಯಮ ಮತ್ತು ಪ್ರಚಾರ ಸಮಿತಿ ಸಂಚಾಲಕ ನವೀನ್ ರೈ ಪಂಜಳ ಅವರು ಸ್ವಾಗತಿಸಿ ಮಾತನಾಡಿ, ಸಹಸ್ರಾರು ಕಾರ್ಯಕರ್ತರ ಶ್ರಮ ಕೆಲಸ ಮತ್ತು ಭಕ್ತರ ಸಹಕಾರದೊಂದಿಗೆ ಅದ್ಭುತವಾಗಿ ಶ್ರೀನಿವಾಸ ಕಲ್ಯಾಣೋತ್ಸವ ಮೂಡಿ ಬಂದಿದೆ ಎಂದರು. ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಕಾರ್ಯಾಧ್ಯಕ್ಷ ಉಮೇಶ್ ಕೋಡಿಬೈಲು, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿಮಠ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ, ಕಲ್ಯಾಣೋತ್ಸವ ಸಮಿತಿ ಸ್ವಾಗತ ಸಮಿತಿ ಅಧ್ಯಕ್ಷ ರಾಜು ಶೆಟ್ಟಿ ಈ ಸಂದರ್ಭ ಉಪಸ್ಥಿತರಿದ್ದರು.
ಶ್ರೀನಿವಾಸ ಕಲ್ಯಾಣೋತ್ಸವದ ಸಂದರ್ಭ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯು ಸಹಕಾರ ಈ ಸಮಾಜದಲ್ಲಿ ಹೊಸವನ್ನು ಮೂಡಿಸಿದೆ. ಧಾರ್ಮಿಕ ಶ್ರದ್ಧಾಕೇಂದ್ರ ವ್ಯಾಪಾರ ಕೇಂದ್ರವಾಗಬಾರದು. ಬದಲಾಗಿ ಧಾರ್ಮಿಕತೆ ಮತ್ತು ಹಿಂದುತ್ವ ಹಾಗು ಧರ್ಮದ ಕೆಲಸಕಾರ್ಯಗಳಿಗೆ ಒಂದಷ್ಟು ಒತ್ತನ್ನು ನೀಡಬೇಕೆಂದು ವ್ಯಾಪಾರಸ್ಥರಿಗೆ ಕನಿಷ್ಟ ಬೆಲೆಯಲ್ಲಿ ಸ್ಟಾಲ್‌ಗಳನ್ನು ನೀಡುವ ಮೂಲಕ ಈ ಬಾರಿಯ ವ್ಯವಸ್ಥಾಪನಾ ಸಮಿತಿ ಮಾದರಿಯಾಗಿದ್ದಾರೆ. ಇದರ ಜೊತೆಗೆ ಶ್ರೀನಿವಾಸ ಕಲ್ಯಾಣೋತ್ಸವದ ಎರಡು ದಿನದ ಕಾರ್ಯಕ್ರಮದಲ್ಲಿ ದೇವಳದ ಆಡಳಿತ ಸಮಿತಿ ಪೂರ್ಣವಾಗಿ ತೊಡಗಿಸಿಕೊಂಡಿರುವುದು ಅಭಿನಂದನೀಯವಾಗಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.