ಚಾಮರಾಜಪೇಟೆಯಲ್ಲಿ ಗೋವುಗಳ ಕೆಚ್ಚಲು ಕಡಿದ ಘಟನೆಯನ್ನು ಖಂಡಿಸಿ ಸೋಮವಾರ (ಜ.13) ಬಿಜೆಪಿ ವತಿಯಿಂದ ಮಂಗಳೂರು ನಗರದಲ್ಲಿ ಪ್ರತಿಭಟನೆ ನಡೆಯಿತು.
ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರು ಮಾತನಾಡಿ, ರಾಜ್ಯ ಸರಕಾರ ಗೋವುಗಳಿಗೆ ರಕ್ಷಣೆ ನೀಡುತ್ತಿಲ್ಲ. ಕೇವಲ ಬೂಟಾಟಿಕೆಯ ಮಾತುಗಳನ್ನಾಡುತ್ತಿದೆ. ಚಾಮರಾಜಪೇಟೆಯಲ್ಲಿ ನಡೆದ ಕೃತ್ಯ ಮಾನವ ಸಮಾಜ ತಲೆತಗ್ಗಿಸಬೇಕಾದ ವಿಚಾರ. ಹಸುಗಳ ಕೆಚ್ಚಲುಗಳನ್ನು ಕೊಯ್ದಿದ್ದಾರೆ. ಕಾಲುಗಳಿಗೆ ಮಚ್ಚಿನಿಂದ ಕೊಚ್ಚಿದ್ದಾರೆ. ಸಿಸಿ ಕೆಮರಾ ಬಂದ್ ಮಾಡಿ ಕೃತ್ಯ ಮಾಡಿದ್ದಾರೆ. ಸರಕಾರ ಯಾರೋ ಒಬ್ಬ ಬಿಹಾರದವರನ್ನು ಅರೆಸ್ಟ್ ಮಾಡಿದ್ದಾರೆ. ಕಣ್ಣಿಗೆ ಮಣ್ಣೆರೆಚಲು ಅರೆಸ್ಟ್ ಮಾಡಿದ್ದಾರೆ. ನಿಜವಾದ ಎಲ್ಲಾ ತಪ್ಪಿತಸ್ಥರನ್ನು ಬಂಧಿಸಬೇಕು. ಹಳ್ಳಿಗಳಲ್ಲಿ ಹಸುಗಳ ಸಾಗಾಟ, ಮಾರಣ ಹೋಮ ನಡೆಯುತ್ತಿದೆ. ಗೋವು, ಮನುಷ್ಯರಿಗೂ ರಕ್ಷಣೆ ಇಲ್ಲ. ಗೋವುಗಳಿಗೆ ರಕ್ಷಣೆ ನೀಡಲಾಗದಿದ್ದರೆ ರಾಜೀನಾಮೆ ನೀಡಿ. ಗಾಯಗೊಂಡಿರುವ ಹಸುಗಳ ಮಾಲಕರಿಗೆ ತಲಾ ಕನಿಷ್ಠ ಐದು ಲ.ರೂ ನೀಡಬೇಕು. ಸರಕಾರ ನಿರಂತರ ಗೋ ರಕ್ಷಣೆಯಲ್ಲಿ ವಿಫಲವಾಗಿದೆ. ಪಶು ಆಸ್ಪತ್ರೆಯ ಜಾಗ ಖಾಲಿ ಮಾಡಿಸಲು ಮತಾಂಧ ಶಕ್ತಿಗಳು ಯತ್ನಿಸಿದರು. ಆ ಜಾಗದಲ್ಲಿ ಗೋಶಾಲೆ ಮಾಡಬೇಕು ಎಂದು ಆಗ್ರಹಿಸಿದರು.
ಜಮೀರ್ ಮೂರು ಹಸು ಕೊಡುತ್ತೇನೆ ಎಂದಿದ್ದಾರೆ. ಹಸು ಕೊಡಿಸುವುದು ಘಟನೆಗೆ ಪರಿಹಾರವಲ್ಲ. ಸರಕಾರ ಗೋ ವಧೆ, ಸಾಗಾಟಗಾರರಿಗೆ ಭಯ ತರಲು ಅಂತವರ ಬ್ಲ್ಯಾಕ್ ಲಿಸ್ಟ್ ಮಾಡಲಿ. ಅಂತವರನ್ನು ಬಂಧಿಸುವ ಧೈರ್ಯ ಸರಕಾರಕ್ಕಿದೆಯಾ? ಕಿರಾತಕರು, ಭಯೋತ್ಪಾದಕರಿಗೆ ನಮ್ಮ ಸರಕಾರವೆಂಬ ಭಂಡ ಧೈರ್ಯವಿದೆ. ಗಾಂಧೀಜಿ ಯವರ ಪಾರ್ಟಿಯಾಗಿದ್ದರೆ ಕಾಂಗ್ರೆಸ್ ನವರಿಗೆ ನಾಚಿಕೆಯಾಗಬೇಕು. ಗಾಂಧೀಜಿ ವಿಚಾರ ಮನೆ ಮನೆಗೆ ತಲುಪಿಸುವುದಾಗಿ ಹೇಳುತ್ತೀರಿ. ಯಾವ ಮುಖ ಇಟ್ಟು ತಲುಪಿಸ್ತೀರಾ. ಮೊದಲು ಗಾಂಧಿ ಹೇಳಿದಂತೆ ಗೋವುಗಳನ್ನು ರಕ್ಷಿಸಿ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮತ್ತಿತರರು ಪಾಲ್ಗೊಂಡಿದ್ದರು.