ನವದೆಹಲಿ: ದೇಶದೆಲ್ಲಡೆ 76ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ರಾಷ್ಟ್ರಪತಿಗಳಿಗೆ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಸಾಥ್ ನೀಡಿದರು. ನಂತರ ಭವ್ಯ ಮೆರವಣಿಗೆ ಪ್ರಾರಂಭವಾಗಿದ್ದು, ಸಮಾರಂಭದಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ.
ಧ್ವಜಾರೋಹಣದ ಬೆನ್ನಲ್ಲೇ ರಾಷ್ಟ್ರಪತಿಗಳಿಗೆ 21 ತೋಪಿನ ಸನ್ಮಾನ ನೀಡಿ ಗೌರವಿಸಲಾಯಿತು. ಬಳಿಕ ಗಣರಾಜ್ಯೋತ್ಸವದ ಪರೇಡ್ ಆರಂಭವಾಯಿತು. ರಾಜಪಥ್ ಕರ್ತವ್ಯಪಥ ಎಂದು ಮರುನಾಮಕರಣಗೊಂಡ ಬಳಿಕ ನಡೆಯುತ್ತಿರುವ 3ನೇ ಗಣರಾಜ್ಯೋತ್ಸವ ಇದಾಗಿದ್ದು, ಪರೇಡ್ ಮೂಲಕ ವಿಶ್ವದ ಮುಂದೆ ದೇಶದ ಶಕ್ತಿ ಕರ್ತವ್ಯಪಥದಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಲಾಗುತ್ತಿದೆ.
ಈ ಬಾರಿಯ ಗಣರಾಜ್ಯೋತ್ಸವ ಜನ್ ಭಾಗಿದರಿ (ಜನರ ಭಾಗವಹಿಸುವಿಕೆ) ವಿಷಯದ ಮೇಲೆ ವಿಶೇಷ ಗಮನ ಹರಿಸಲಾಗಿದೆ. ಸಾವಿರಾರು ಜನಸಾಮಾನ್ಯರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದು, 10 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದಾರೆ.
ಗಣರಾಜ್ಯೋತ್ಸವ ಸಡಗರ, ಚಳಿಯ ನಡುವೆಯೂ ದೇಶಾಭಿಮಾನವನ್ನು ಬಿಂಬಿಸುವ ಮೆರವಣಿಗೆ. ಸಹಸ್ರಾರು ಮಂದಿ ಖುಷಿಯಿಂದಲೇ ಗಣರಾಜ್ಯೋತ್ಸವದಲ್ಲಿ ಭಾಗಿಯಾದ ಕ್ಷಣ. ಸುಮಾರು ಒಂದೂವರೆ ಗಂಟೆಗಳ ಕಾಲ ಕರ್ತವ್ಯಪಥದಲ್ಲಿ ಭಾರತದ ಕಲೆ, ಸಂಸ್ಕೃತಿ, ಹತ್ತಾರು ಕ್ಷೇತ್ರಗಳಲ್ಲಿನ ಸಾಧನೆಯನ್ನು ಬಿಂಬಿಸುವ ಹಿರಿಮೆಯ ಪ್ರದರ್ಶನ, ಯೋಧರು, ಕಲಾವಿದರು, ಸಾಧಕರ ಸಮ್ಮಿಲನದ ಖುಷಿಯ ಕ್ಷಣಗಳು, ಇಡೀ ಕರ್ತವ್ಯಪಥವು ಮಿನಿ ಭಾರತವಾಗಿಯೇ ಪರಿವರ್ತನೆಯಾಗಿತ್ತು.
ಭಾರತ ಮಾತ್ರವಲ್ಲದೇ ಹೊರ ದೇಶಗಳಿಂದಲೂ ಆಗಮಿಸಿರುವ ಗಣ್ಯರು ಈ ಬಾರಿಯ 76ನೇ ವರ್ಷದ ಗಣರಾಜ್ಯೋತ್ಸವವನ್ನು ಸಾಕ್ಷೀಕರಿಸಿದರು. ಅದರಲ್ಲೂ ಇಂಡೋನೇಷ್ಯಾದ ಅಧ್ಯಕ್ಷರು ಹಾಗೂ ಅವರ ತಂಡ ವಿಶೇಷ ಅತಿಥಿಯಾಗಿದ್ದಾರೆ. ಗಣರಾಜೋತ್ಸವ ಪರೇಡ್ ಬೆಳಿಗ್ಗೆಯೇ ಆರಂಭವಾಗಿದ್ದು, ಸುಮಾರು 90 ನಿಮಿಷಗಳ ಕಾಲ ಮೆರವಣಿಗೆ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ಗೌರವ ಸಲ್ಲಿಸುವುದರೊಂದಿಗೆ ಸಮಾರಂಭವು ಪ್ರಾರಂಭವಾಯಿತು. ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಡಿದ ವೀರರಿಗೆ ಶ್ರದ್ಧಾಂಜಲಿ ಸಲ್ಲಿಸಿ ನಂತರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದರು.
ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ಗಣರಾಜ್ಯೋತ್ಸವ ಪರೇಡ್‌ಗೆ ಮುಖ್ಯ ಅತಿಥಿಯಾಗಿದ್ದರು. ಭಾರತದ ರಾಷ್ಟ್ರಪತಿ ದೌಪದಿ ಮುರ್ಮು ಅವರೊಂದಿಗೆ ಪ್ರಬೋವೋ ಅವರು ಕರ್ತವ್ಯಪಥಕ್ಕೆ ಆಗಮಿಸಿದರು. ಅವರನ್ನು ಪ್ರಧಾನಿ ನರೇಂದ್ರ ಮೋದಿ ಬರ ಮಾಡಿಕೊಂಡರು. ವಿಶೇಷ ಅತಿಥಿಯೊಂದಿಗೆ ರಾಷ್ಟ್ರಪತಿ ವಿಶೇಷ ವಾಹನದಲ್ಲಿ ಅಶ್ವಾರೋಹಿ ಪಡೆಯ ಹಿನ್ನೆಲೆಯೊಂದಿಗೆ ಪರೇಡ್‌ನತ್ತ ಆಗಮಿಸಿದರು. ಪ್ರಧಾನಿ ನರೇಂದ್ರ ಮೋದಿ ಕೂಡ ಕರ್ತವ್ಯ ಪಥಕ್ಕೆ ಬಂದರು.
152 ಸದಸ್ಯರನ್ನು ಒಳಗೊಂಡಿರುವ ಇಂಡೋನೇಷಿಯಾದ ರಾಷ್ಟ್ರೀಯ ಸಶಸ್ತ್ರ ಪಡೆಗಳ ಮೆರವಣಿಗೆಯ ತುಕಡಿ ಮತ್ತು 190 ಸದಸ್ಯರೊಂದಿಗೆ ಇಂಡೋನೇಷ್ಯಾದ ಮಿಲಿಟರಿ ಅಕಾಡೆಮಿಯ ಬ್ಯಾಂಡ್ ಪರೇಡ್‌ನಲ್ಲಿ ಭಾಗವಹಿಸಿದೆ. ರಾಷ್ಟ್ರೀಯ ಪ್ರಾಮುಖ್ಯತೆಯ ಕಾರ್ಯಕ್ರಮಗಳಲ್ಲಿ ‘ಜನ ಸಹಭಾಗಿತ್ವ’ ಹೆಚ್ಚಿಸುವ ಸರ್ಕಾರದ ಉದ್ದೇಶಕ್ಕೆ ಅನುಗುಣವಾಗಿ ಇದನ್ನು ನೋಡಲು ಸುಮಾರು 10,000 ಅತಿಥಿಗಳನ್ನು ಆಹ್ವಾನಿಸಲಾಗಿದೆ. ಇದರಡಿ ಈ ಬಾರಿ ಇಂಡೋನೇಷ್ಯಾದ ತಂಡಗಳು ಕಾರ್ಯಕ್ರಮದಲ್ಲಿ ಭಾಗಿಯಾದವು.
ಲೆಫ್ಟಿನೆಂಟ್ ಅಹಾನ್ ಕುಮಾರ್ ನೇತೃತ್ವದ 61 ಅಶ್ವಸೈನ್ಯದ ಮೊದಲ ಸೇನಾ ತುಕಡಿಯು ಗಣರಾಜ್ಯೋತ್ಸವ ಪರೇಡ್ ಅನ್ನು ಮುನ್ನಡೆಸಿತು. 1953 ರಲ್ಲಿ ಆರಂಭಗೊಂಡ 61 ಅಶ್ವಸೈನ್ಯವು ವಿಶ್ವದಲ್ಲಿ ಏಕೈಕ ಸೇವೆ ಸಲ್ಲಿಸುತ್ತಿರುವ ಹಾರ್ಸ್ ಕ್ಯಾವಲಿ ರೆಜಿಮೆಂಟ್ ಎನ್ನುವ ವಿಶೇಷತೆ ಹೊಂದಿದೆ. ಇದು ಕೂಡ ಗಮನ ಸೆಳೆಯಿತು.
ರಾಷ್ಟ್ರಪತಿ ದೌಪದಿ ಮುರ್ಮು ಅವರು ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪೆರೇಡ್ ಕಮಾಂಡರ್, ಲೆಫ್ಟಿನೆಂಟ್ ಜನರಲ್ ಭವಿಶ್ ಕುಮಾರ್ ಮತ್ತು ಪೆರೇಡ್‌ನ ಎರಡನೇ ಕಮಾಂಡ್ ಮೇಜರ್ ಜನರಲ್ ಸುಮಿತ್ ಮಹ್ರಾ ಅವರಿಂದ ಗೌರವ ವಂದನೆ ಸ್ವೀಕರಿಸಿದ್ದಾರೆ. ಹೆಲಿಕಾಪ್ಟರ್ ಗಳ ಮೂಲಕ ಪುಷ್ಪವೃಷ್ಟಿ ಮಾಡಲಾಗಿದೆ. ಭಾರತೀಯ ವಾಯುಪಡೆಯ 129 ಹಲಿಕಾಪ್ಟರ್ ಘಟಕದ Mi-17 IV ಚಾಪರ್‌ಗಳಿಂದ ಕರ್ತವ್ಯ ಹಾದಿಯಲ್ಲಿ ಹೂವಿನ ದಳಗಳನ್ನು ಸುರಿಸಲಾಯಿತು. ಹೆಲಿಕಾಪ್ಟರ್‌ಗಳು ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಆಯಾ ಸೇವಾ ಧ್ವಜಗಳೊಂದಿಗೆ ರಾಷ್ಟ್ರೀಯ ಧ್ವಜವನ್ನು ಹೊತ್ತೊಯ್ದವು. ಹೆಲಿಕಾಪ್ಟರ್‌ಗಳು ಗಣರಾಜ್ಯೋತ್ಸವದ ಮೆರವಣಿಗೆಗಾಗಿ ಕರ್ತವ್ಯ ಹಾದಿಯಲ್ಲಿ ಹಾಜರಿದ್ದ ಪ್ರೇಕ್ಷಕರ ಮೇಲೆ ಹೂವಿನ ದಳಗಳನ್ನು ಸುರಿಸಿದವು. ಗ್ರೂಪ್ ಕ್ಯಾಪ್ಟನ್ ಅಲೋಕ್ ಅಹ್ವಾವತ್ ನೇತೃತ್ವ ವಹಿಸಿದ್ದರು.