ಹೊಸದಿಲ್ಲಿ: “ಸನಾತನ ಧರ್ಮವು ನಮ್ಮ ರಾಷ್ಟ್ರೀಯ ಧರ್ಮವಾಗಿದ್ದು, ಈ ಬಗ್ಗೆ ಯಾರಿಗೂ ಅನುಮಾನಗಳು ಇರಬಾರದು..” ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಸನಾತನ ಧರ್ಮ ಈ ದೇಶದ ಆತ್ಮ ಎಂದು ಅಭಿಪ್ರಾಯಪಟ್ಟರು.
ಸನಾತನ ಧರ್ಮವನ್ನು ನಾವು ಯಾವುದೇ ಪಂಥ ಅಥವಾ ಸಂಪ್ರದಾಯದ ಜೊತೆ ಹೋಲಿಸಬಾರದು. ದೇಶದಲ್ಲಿ ಅನೇಕ ಧರ್ಮಗಳು ಅಸ್ತಿತ್ವದಲ್ಲಿದ್ದು, ಇವೆಲ್ಲವೂ ಸನಾತನ ಧರ್ಮವೆಂಬ ದೊಡ್ಡ ಮರದ ರೆಂಬೆಗಳಾಗಿವೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.
“ಸನಾತನ ಧರ್ಮ ಕೇವಲ ಹಿಂದೂ ಧರ್ಮಕ್ಕೆ ಸಿಮೀತವಲ್ಲ. ಸನಾತನ ಧರ್ಮವು ಈ ದೇಶದ ಆತ್ಮವಾಗಿದ್ದು, ಭಾರತೀಯತೆಯ ಸಂಕೇತವಾಗಿದೆ. ದೇಶದ ಜನತೆ ತಮ್ಮ ಜಾತಿ ಧರ್ಮವನ್ನು ಮೀರಿ ಸನಾತನ ಧರ್ಮದ ಮೌಲ್ಯ ಮತ್ತು ಆದರ್ಶಗಳನ್ನು ಅರಿತುಕೊಳ್ಳಬೇಕು. ಸನಾತನ ಧರ್ಮ ದೇಶದ ಭವಿಷ್ಯಕ್ಕೆ ಮಾರ್ಗದರ್ಶಿ ಎಂಬುದನ್ನು ನಾವು ಮರೆಯಬಾರದು..” ಎಂದು ಯೋಗಿ ಆದಿತ್ಯನಾಥ್ ಹೇಳಿದರು
“ಸನಾತನ ಧರ್ಮವಿಲ್ಲದೇ ಭಾರತವಿಲ್ಲ, ಭಾರತವಿಲ್ಲದೇ ಸನಾತನ ಧರ್ಮವಿಲ್ಲ. ಸನಾತನ ಧರ್ಮದಲ್ಲಿ ಭಾರತದ ಅಸ್ತಿತ್ವ ಅಡಗಿದೆ. ನಾವು ಈ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಸನಾತನ ಧರ್ಮವನ್ನು ಒಂದು ಹಿಂದೂ ಧರ್ಮಕ್ಕೆ ಮಾತ್ರ ಸಿಮೀತಗೊಳಿಸಿ ನೋಡುವುದು ಸರಿಯಲ್ಲ. ಇದು ಜಾತಿ ಧರ್ಮಗಳನ್ನು ಮೀರಿದ ಆಧ್ಯಾತ್ಮಿಕ ಸಿದ್ಧಾಂತ..” ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ನುಡಿದರು.
ಪ್ರಯಾಗರಾಜ್ ಮಹಾಕುಂಭ ಮೇಳ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಭಾರತದ ಆಧ್ಮಾತ್ಮಿಕ ಶಕ್ತಿಯನ್ನು ಮಹಾಕುಂಭ ಮೇಳವು ಜಗತ್ತಿಗೆ ಪ್ರದರ್ಶಿಸಿದೆ. ಭಾರತದ ಆಧ್ಯಾತ್ಮಿಕ ಪರಂಪರೆಯನ್ನು ಕಂಡು ಜಗತ್ತು ಮೂಕವಿಸ್ಮಿತವಾಗಿದೆ. ಇದಕ್ಕೆ ಸನಾತನ ಧರ್ಮದ ಪ್ರತಿಪಾದನೆಗಳೇ ಪ್ರೇರಣೆ..” ಎದು ಯೋಗಿ ಆದಿತ್ಯನಾಥ್ ಇದೇ ವೇಳೆ ಸಂತಸ ವ್ಯಕ್ತಪಡಿಸಿದರು.
“ಸನಾತನ ಧರ್ಮ ಎಂದಾಕ್ಷಣ ಒಂದು ನಿರ್ದಿಷ್ಟ ಧರ್ಮದ ಚೌಕಟ್ಟಿನಲ್ಲಿ ನೋಡಲು ಆರಂಭಿಸುತ್ತೇವೆ. ಇದನ್ನು ಹಿಂದೂ, ಇಸ್ಲಾಂ, ಕ್ರಿಶ್ಚಿಯನ್ ಎಂಬ ಚೌಕಟ್ಟಿನಲ್ಲಿ ನೋಡುವುದು ಸರಿಯಲ್ಲ. ಸನಾತನ ಧರ್ಮವು ಇಡೀ ವಿಶ್ವದ ಕಲ್ಯಾಣ ಬಯಸುತ್ತಿದ್ದು, ಸನಾತನ ಧರ್ಮದ ಸಿದ್ಧಾಂತವನ್ನು ವಿಶಾಲ ದೃಷ್ಟಿಕೋನದಿಂದ ನೋಡಬೇಕಿದೆ..” ಎಂದು ಯುಪಿ ಸಿಎಂ ಸಲಹೆ ನೀಡಿದರು.
“ಮಹಾಕುಂಭ ಮೇಳವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜನೆ ಮಾಡಬೇಕು ಎಂಬುದು ತಮ್ಮ ಸರ್ಕಾರದ ನಿಲುವಾಗಿತ್ತು. ಇದಕ್ಕಾಗಿ ಸರ್ಕಾರಿ ಯಂತ್ರವನ್ನು ಸಜ್ಜುಗೊಳಿಸುವುದು ಸವಾಲಿನ ಕೆಲಸವಾಗಿತ್ತು. ಆದರೆ ನಾವು ಎಲ್ಲಾ ಸವಾಲುಗಳನ್ನೂ ಮೀರಿ ಮಹಾಕುಂಭ ಮೇಳವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದೇವೆ. ಆದರೆ ಹಿಂದಿನ ಸರ್ಕಾರಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಮಹಾಕುಂಭ ಮೇಳಕ್ಕೆ ದೊರೆಯಬೇಕಾಗಿದ್ದ ಪ್ರಾಶಸ್ತ್ಯ ದೊರೆಯಲಿಲ್ಲ..” ಎಂದು ಯೋಗಿ ಆದಿತ್ಯನಾಥ್ ಪರೋಕ್ಷವಾಗಿ ಸಮಾಜವಾದಿ ಪಕ್ಷದ ಸರ್ಕಾರವನ್ನು ತರಾಟೆತೆ ತೆಗೆದುಕೊಂಡರು.