ಬೆಂಗಳೂರು: ಕುಡಿದ ಮತ್ತಿನಲ್ಲಿ ರೌಡಿ ಶೀಟರ್ ಅರ್ಧಗಂಟೆಯಲ್ಲಿ ನಾಲ್ವರಿಗೆ ಚಾಕುವಿನಿಂದ ಇರಿದ ಘಟನೆ ಫೆಬ್ರವರಿ 8ರ ರಾತ್ರಿ ಇಂದಿರಾನಗರದಲ್ಲಿ ನಡೆದಿದೆ. ರೌಡಿ ಕದಂಬ ಎಂಬಾತ ಅಂದು ರಾತ್ರಿ 9:30 ರಿಂದ 10 ಗಂಟೆಯ ಒಳಗಾಗಿ ಸರಣಿ ಕೃತ್ಯ ಎಸಗಿದ್ದಾನೆ. ಇಂದಿರಾನಗರದ ನಿವಾಸಿಗಳಾದ ಜಶ್ವಂತ ಪಿ (19), ಮಹೇಶ್ ಸೀತಾಪತಿ ಎಸ್ (23), ದೀಪಕ್ ಕುಮಾರ್ ವರ್ಮಾ (24) ಮತ್ತು ತಮ್ಮಯ್ಯ (44) ಎಂಬುವರಿಗೆ ಚಾಕುವಿನಿಂದ ಇರಿದಿದ್ದಾನೆ.
ಜಸ್ವಂತ್ ಎಂಬುವವರು ರಾತ್ರಿ 9 ಗಂಟೆಗೆ ಇಂದಿರಾನಗರದ 6 ಮುಖ್ಯ ರಸ್ತೆಯಲ್ಲಿರುವ ನೀರಿನ ಘಟಕಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಈ ವೇಳೆ ಅಡ್ಡಗಟ್ಟಿದ್ದ ಆರೋಪಿ ಚಾಕು ತೋರಿಸಿ ತಾನೂ ಸೂಚಿಸಿದ ಸ್ಥಳಕ್ಕೆ ಕರೆದೊಯ್ಯುವಂತೆ ಬೆದರಿಸಿದ್ದನು. ಆಗ ಆರೋಪಿಯನ್ನು ಇಂದಿರಾನಗರದ 4ನೇ ಕ್ರಾಸ್ ಕಡೆಗೆ ಕರೆದು ಕೊಂಡು ಹೋಗುವಾಗ ದ್ವಿಚಕ್ರ ವಾಹನವನ್ನು ಎಡಕ್ಕೆ ತಿರುಗಿಸಿದಕ್ಕೆ ಕೋಪಗೊಂಡ ಕದಂಬ ಏಕಾಏಕಿ ಚಾಕು ತೆಗೆದು ಜಸ್ವಂತ್ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ.
ಇಂದಿರಾನಗರದ ನೂರಡಿ ರಸ್ತೆಯ ಕುಂಡು ಹೋಟೆಲ್ ಸಮೀಪ ದೀಪಕ್ ಕುಮಾರ್ ವರ್ಮಾ ಎಂಬುವವರ ಪಾನಿ ಪಾನಿಪೂರಿ ಅಂಗಡಿಗೆ 9.40ಕ್ಕೆ ಹೋಗಿದ್ದಾನೆ. ಪಾನಿಪೂರಿ ಕೊಡುವಂತೆ ಕೇಳಿದ್ದನು. ಮಸಾಲೆ ಖಾಲಿಯಾಗಿದೆ ಎಂದಿದ್ದಕ್ಕೆ ಏಕಾಏಕಿ ಚಾಕು ತೆಗೆದು ದೀಪಕ್ ಕುತ್ತಿಗೆಗೆ ಇರಿದಿದ್ದನು.
ಇಂದಿರಾನಗರದ ಎಂಐ ಶೋ ರೂಮ್ ಬಳಿ ಇರುವ ತಮ್ಮಯ್ಯ ಎಂಬುವವರ ಪಾನಿಪೂರಿ ಅಂಗಡಿಗೆ ರಾತ್ರಿ 9.50ಕ್ಕೆ ಆರೋಪಿ ಕದಂಬ ಹೋಗಿದ್ದಾನೆ. ಪಾನಿಪೂರಿ ಕೊಡುವಂತೆ ಕೇಳಿ ಸ್ಕ್ಯಾನರ್ ಎಲ್ಲಿದೆ ಎಂದಿದ್ದಾನೆ. ಆಗ, ಮೊದಲು ಪಾನಿಪೂರಿ ತಿಂದು ಬಳಿಕ ಹಣ ಕೊಡಿ ಎಂದು ಹೇಳಿದಕ್ಕೆ ಕೋಪಗೊಂಡ ಆರೋಪಿ ಕದಂಬ ಚಾಕು ತೆಗೆದು ನಿನಗೇಕೆ ದುಡ್ಡು ಕೊಡಬೇಕು ಎಂದು ತಮ್ಮಯ್ಯಗೆ ಇರಿದು ಪರಾರಿಯಾಗಿದ್ದಾನೆ.
ಬಳಿಕ, ಭಾನುವಾರ ಬೆಳಗಿನ ಜಾವ 2.30 ರ ಸುಮಾರಿಗೆ 80 ಅಡಿ ರಸ್ತೆಯ ಬಳಿ ಆರೋಪಿ ಕದಂಬ, ದ್ವಿಚಕ್ರ ವಾಹನ ಚಾಲಕ ಆದಿಲ್ (24) ಎಂಬುವರನ್ನು ಅಡ್ಡಗಟ್ಟಿ, ಕೆಆರ್ ಪುರಂ ರೈಲ್ವೆ ನಿಲ್ದಾಣಕ್ಕೆ ಬಿಡುವಂತೆ ಹೇಳಿದ್ದಾನೆ. ಅದಕ್ಕೆ, ಆದಿಲ್ ನಾನು ಮನೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಕುಪಿತನಾದ ಕದಂಬ ಚಾಕು ತೆಗೆದು ಇರಿದು ಪರಾರಿಯಾಗಿದ್ದಾನೆ. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಐದು ಪ್ರತ್ಯೇಕ ಎಫ್ಐಆರ್ಗಳು ದಾಖಲಾಗಿವೆ. ಸದ್ಯ ಆರೋಪಿ ಕದಂಬ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆರೋಪಿಯನ್ನು ಪತ್ತೆಹಚ್ಚಲು ನಾಲ್ಕು ತಂಡಗಳನ್ನು ರಚಿಸಿದ್ದೇವೆ ಎಂದು ಜಂಟಿ ಪೊಲೀಸ್ ಆಯುಕ್ತ (ಪೂರ್ವ) ರಮೇಶ್ ಬಾನೋತ್ ತಿಳಿಸಿದರು.