ಪುತ್ತೂರು: ದಿ ಪುತ್ತೂರು ಕ್ಲಬ್ ವತಿಯಿಂದ ಬಾಬ್ ಕಾರ್ಡ್ ಸಹಕಾರದೊಂದಿಗೆ ಆಯೋಜಿಸುವ ಮಿನಿ ಮ್ಯಾರಥಾನ್ ಓಟ ‘ಬಲೆ ಬಲಿಪುಗ’ ಜುಲೈ 6 ರಂದು ಪುತ್ತೂರಿನಲ್ಲಿ ನಡೆಯಲಿದೆ ಎಂದು ದಿ ಪುತ್ತೂರು ಕ್ಲಬ್ ಅಧ್ಯಕ್ಷ ಡಾ.ದೀಪಕ್ ರೈ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆಯುವ ಮ್ಯಾರಥಾನ್ ಓಟ 21 ಕಿ.ಮೀ. ಹಾಲ್ಫ್ ಓಟ, 10 ಕಿ.ಮೀ., 5 ಕಿ.ಮೀ. ಹಾಗೂ 3 ಕಿ.ಮೀ. ಹೀಗೆ ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ. ಈ ಪೈಕಿ 21 ಕಿ.ಮೀ. 18ವರ್ಷ ಮೇಲ್ಪಟ್ಟವರಿಗೆ ಹಾಗೂ 10, 5, 3 ಕಿ.ಮೀ. 15 ವರ್ಷ ಮೇಲ್ಪಟ್ಟವರಿಗೆ ನಡೆಯಲಿದೆ. ಒಟ್ಟು ಮ್ಯಾರಥಾನ್ ಓಟಕ್ಕೆ ಬಹುಮಾನವಾಗಿ 3.40 ಲಕ್ಷ ರೂ. ಬಹುಮಾನ ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಸರ್ಟಿಫಿಕೇಟ್ ಹಾಗೂ ಮೆಡಲ್ ನೀಡಲಾಗುವುದು. ಮ್ಯಾರಥಾನ್ ಓಟದಲ್ಲಿ ಜಿಲ್ಲೆ, ರಾಜ್ಯ, ದೇಶದಿಂದ ಸುಮಾರು 1000-1500 ಅಥ್ಲಿಟ್ ಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಓಟದಲ್ಲಿ ಪಾಲ್ಗೊಳ್ಳುವವರಿಗೆ ಸಂಪೂರ್ಣ ಆನ್ ಲೈನ್ ನಲ್ಲಿ ನೋಂದಾವಣೆ ಪ್ರಕ್ರಿಯೆ ನಡೆಯಲಿದೆ. ಓಟ ನಡೆಯುವ ರಸ್ತೆಯುದ್ದಕ್ಕೂ ಇಲೆಕ್ಟ್ರಿಕಲ್ ಟೈಮರ್ ಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.
ಮ್ಯಾರಥಾನ್ ಓಟ ಬೆಳಿಗ್ಗೆ 6 ಗಂಟೆಗೆ 21 ಕಿ.ಮೀ. ಓಟ ದಿ ಪುತ್ತೂರು ಕ್ಲಬ್ ನಿಂದ ಆರಂಭಗೊಂಡು ರೈಲ್ವೇ-ಬೈಪಾಸ್—ರ್ಬೆ-ಬೊಳುವಾರು-ಉಪ್ಪಿನಂಗಡಿ ರಸ್ತೆ ಮೂಲಕ ತೆರಳಿ ಸೇಡಿಯಾಪು ತಲುಪಿ ಅಲ್ಲಿಂದ ಪುತ್ತೂರು ಕ್ಲಬ್ ಗೆ ಪುನಃ ಹಿಂತಿರುಗಲಾಗುತ್ತದೆ. ಪ್ರತಿ 15 ನಿಮಿಷ ಬಿಟ್ಟು ಉಳಿದ ವಿಭಾಗ ಆರಂಭಗೊಳ್ಳಲಿದೆ. ಎಲ್ಲಾ ವಿಭಾಗಗಳಿಗೂ ಇದೇ ಮಾರ್ಗಸೂಚಿ ನೀಡಲಾಗಿದೆ. ಪಾಲ್ಗೊಳ್ಳುವವರಿಗೆ ಬಿಂದು ಕಂಪೆನಿಯಿಂದ ನೀರಿನ ವ್ಯವಸ್ಥೆ ಮಾಡಲಾಗಿದೆ. 3 ಕಿ.ಮೀ. ವಿಭಾಗದಲ್ಲಿ ಮೊದಲ 300 ಮಂದಿಗೆ ಫ್ರೀಯಾಗಿ ಅವಕಾಶ ನೀಡಲಾಗಿದೆ. ಉಳಿದಂತೆ 5 ಕಿ.ಮೀ. ಸ್ಪರ್ಧಿಗಳಿಗೆ 299, 10 ಕಿ.ಮೀ. 499 ಹಾಗೂ 21 ಕಿ.ಮೀ. 699 ನೋಂದಾವಣೆ ಶುಲ್ಕ ವಿಧಿಸಲಾಗಿದೆ. ಓಟಕ್ಕಾಗಿ ಈಗಾಗಲೇ 125 ಮಂದಿ ವಾಲಂಟರ್ ಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಮ್ಯಾರಥಾನ ಓಟದ ಅಂಗವಾಗಿ ಜು.22 ರಂದು ಬೆಳಿಗ್ಗೆ 6.30 ಕ್ಕೆ ಪ್ರಿ ರನ್ ಕಿಲ್ಲೆ ಮೈದಾನದಿಂದ ಮುಖ್ಯ ರಸ್ತೆಯಾಗಿ ಫಿಲೋಮಿನಾ ಕಾಲೇಜಿನ ತನಕ ಮಾಡಲಿದ್ದೇವೆ. ಪುತ್ತೂರನ್ನು ರನ್ನಿಂಗ್ ಮ್ಯಾಪ್ ನಲ್ಲಿ ಗುರುತಿಸುವ ಉದ್ದೇಶದಿಂದ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ತಿಳಿಸಿದರು.
ವೆಬ್ ಪೀಪಲ್ ನ ಶರತ್ ಮಾತನಾಡಿ ಎಲ್ಲಾ ಸ್ಪರ್ಧಿಗಳಿಗೆ ಟಿಶರ್ಟ್ ನೀಡಲಿದ್ದೇವೆ. ಫಿನಿಶಿಂಗ್ ಮಾಡಿದ ಎಲ್ಲರಿಗೂ ಮೆಡಲ್ ನೀಡಲಾಗುವುದು. ಈಗಾಗಲೇ 200 ಮಂದಿ ನೋಂದಾವಣೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಂದು ಕಂಪೆನಿಯ ಮಾರುಕಟ್ಟೆ ವಿಭಾಗದ ಹರಿಪ್ರಸಾದ್, ಪುತ್ತೂರು ಕ್ಲಬ್ ಉಪಾಧ್ಯಕ್ಷ ದೀಪಕ್ ಕೆ.ಪಿ., ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಕ ಎಲಿಯಾಸ್ ಪಿಂಟೋ ಉಪಸ್ಥಿತರಿದ್ದರು