ರಾಜ್ಯದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಹೆಚ್.ಡಿ.ರೇವಣ್ಣ ವಿರುದ್ಧ ಲೌಂಗಿಕ ದೌರ್ಜನ್ಯ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಈ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಮೇಲೂ ಸಾಲು ಸಾಲು ಆರೋಪಗಳನ್ನು ಮಾಡಲಾಗುತ್ತಿದೆ. ಇನ್ನು ಮತ್ತೊಂದೆಡೆ ಲೋಕಸಭಾ ಚುನಾವಣೆಯ ಮತದಾನ ಮುಗಿದ ಹಿನ್ನೆಲೆ ಎಲ್ಲಾ ಜಂಜಾಟಗಳನ್ನು ತೊರೆದು ಡಿಕೆ ಶಿವಕುಮಾರ್ ಚಿಕ್ಕಮಗಳೂರಿನ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ನಿನ್ನೆ ಸಂಜೆಯೇ ಡಿಸಿಎಂ ಡಿಕೆ ಶಿವಕುಮಾರ್, ಡಿಕೆ ಸುರೇಶ್ ರೆಸಾರ್ಟ್ಗೆ ಆಗಮಿಸಿದ್ದು ಡಿಸಿಎಂ ಡಿಕೆಗೆ ಕುಣಿಗಲ್ ಶಾಸಕ ರಂಗನಾಥ್, ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಸಾಥ್ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಹೆಸರು ಮುನ್ನಲೆಗೆ ಬಂದಿತ್ತು. ನಿನ್ನೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಯವರು ಡಿಸಿಎಂ ಡಿಕೆ.ಶಿವಕುಮಾರ್ ವಿರುದ್ಧ ಸಾಲು ಸಾಲು ಆರೋಪಗಳನ್ನ ಮಾಡಿದ್ದರು. ಪೊಲೀಸರಿಗೆ ಹೆದರಿಸಿ ಪೆನ್ಡ್ರೈವ್ ಹಂಚಿಕೆ ಮಾಡಿದ್ದಾರೆ. ಎಸ್ಐಟಿ ಅಂದ್ರೆ ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಮ್ ಎಂದು ಗುಡುಗಿದ್ದರು. ರಾಜ್ಯಾದ್ಯಂತ ಜೆಡಿಎಸ್ ಕಾರ್ಯಕರ್ತರು ಡಿಕೆ ಶಿವಕುಮಾರ್ ಮೇಲೆ ಆಕ್ರೋಶ ಹೊರ ಹಾಕಿದ್ದರು. ಇನ್ನು ಮತ್ತೊಂದೆಡೆ ರಾಜ್ಯದಲ್ಲಿ ನಿನ್ನೆ ಎರಡನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಮುಗಿದ ಹಿನ್ನೆಲೆ ಡಿಕೆ ಬ್ರದರ್ಸ್ ರಿಲ್ಯಾಕ್ಸ್ ಮೂಡ್ಗೆ ಜಾರಿದ್ದಾರೆ.
ತಮ್ಮ ಮೇಲಿನ ಆರೋಪ, ಚುನಾವಣೆ ದಣಿವು ನೀಗಿಸಿಕೊಳ್ಳಲು ಚಿಕ್ಕಮಗಳೂರು ತಾಲೂಕಿನ ಮೂಕ್ತಿಹಳ್ಳಿ ಗ್ರಾಮದ ಬಳಿ ಇರುವ, ತಮ್ಮ ಅಳಿಯನ ಒಡೆತನದ ಸೆರಾಯ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ನಿನ್ನೆ ಸಂಜೆಯೇ ರೆಸಾರ್ಟ್ಗೆ ಆಗಮಿಸಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನು ಸೆರಾಯ್ ರೆಸಾರ್ಟ್ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ರೆಸಾರ್ಟ್ ನೊಳಗೆ ಮಾಧ್ಯಮಕ್ಕೆ ನಿರ್ಬಂಧ ಹೇರಲಾಗಿದೆ.