ಸೌದಿ, ಅಕ್ಟೋಬರ್ 02: ಕಾಕ್‌ಪಿಟ್‌ನಲ್ಲಿ ಇರಿದ ಪರಿಣಾಮ ತೀವ್ರ ರಕ್ತಸ್ರಾವದಿಂದ ಕೆಳಗೆ ಕುಸಿದು ಬಿದ್ದಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚರ್, ಪ್ರಜ್ಞೆ ತಪ್ಪುವ ಕಡೆಯ ಕ್ಷಣಗಳಲ್ಲೂ ಅದಮ್ಯ ಸಂಕಲ್ಪದಿಂದ ಕಾಕ್‌ಪಿಟ್ ಬಾಗಿಲನ್ನು ಅನ್‌ಲಾಕ್ ಮಾಡಿ 174 ಪ್ರಯಾಣಿಕರ ಜೀವ ಉಳಿಸಿದ್ದರು. ಆಸ್ಪತ್ರೆಯ ಹಾಸಿಗೆಯಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೀಡಿಯೊ ಕರೆಯಲ್ಲಿ ಮಾತನಾಡಿದ ಸ್ಮಿತ್, “ನನಗೆ ಸಂಕಷ್ಟ ಮತ್ತು ನೋವು ಎದುರಾದಾಗಲೆಲ್ಲಾ ನಾನು ಹನುಮಾನ್ ಚಾಲೀಸಾ ಪಠಿಸುತ್ತೇನೆ, ಆ ರಕ್ತಸಿಕ್ತ ಕ್ಷಣದಲ್ಲೂ ನಾನು ಹನುಮಾನ್ ಚಾಲೀಸಾವನ್ನೇ ಜಪಿಸುತ್ತಿದ್ದೆ ಎಂದು ಹೇಳಿ ಭಾವುಕರಾಗಿದ್ದಾರೆ.
ತಮ್ಮ ನೆಚ್ಚಿನ ನಾಯಕ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದನ್ನು ತಮ್ಮ ಜೀವನದ ಅತ್ಯಂತ ಹೆಮ್ಮೆಯ ಕ್ಷಣವೆಂದು ಬಣ್ಣಿಸಿದ ಸ್ಮಿತ್, ತಮ್ಮ ಧರ್ಮ ಮತ್ತು ಸಂಸ್ಕಾರವೇ ಆ ಸಾವು-ಬದುಕಿನ ಹೋರಾಟದಲ್ಲಿ ಮಾನಸಿಕ ಶಕ್ತಿ ನೀಡಿತು ಎಂದು ಭಾವುಕರಾಗಿ ಹಂಚಿಕೊಂಡರು. ನಾನು ದೇಶದಿಂದ ದೂರವಿರಬಹುದು ಆದರೆ ಸಂಸ್ಕಾರದಿಂದ ದೂರವಿಲ್ಲ ಎಂದು ಸ್ಮಿತ್ ಹೇಳಿದ್ದಾರೆ.
ಆ ಕ್ಷಣದಲ್ಲಿ ನಾನು ನನ್ನ ಜೀವನದ ಬಗ್ಗೆ ಯೋಚಿಸಿದ್ದೆ, ನಾನು ಇನ್ನು ಉಳಿಯುವುದಿಲ್ಲ, ಬದುಕಲ್ಲ ಎಂದೇ ಭಾವಿಸಿದ್ದೆ. ಆದರೆ ವಿಮಾನದಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸುವುದು ಕೂಡ ನನ್ನ ಕರ್ತವ್ಯವಾಗಿತ್ತು. ಕೆಳಗೆ ಬಿದ್ದ 5-10 ಸೆಕೆಂಡುಗಳಲ್ಲಿ ಹೇಗೋ ನಿಯಂತ್ರಣ ಸಾಧಿಸಿ ಕಾಕ್‌ಪಿಟ್ ಬಾಗಿಲು ತೆರೆದೆ. ಈ ರಕ್ಷಣಾ ಕಾರ್ಯದಲ್ಲಿ ವಿಮಾನದಲ್ಲಿದ್ದ ಪ್ರತಿಯೊಬ್ಬರ ಪಾತ್ರವೂ ಇತ್ತು. ಸೌದಿ ಅರೇಬಿಯಾದಲ್ಲಿ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಮತ್ತು ಕಾಳಜಿ ಸಿಕ್ಕಿದೆ ಎಂದು ಸ್ಮಿತ್ ಹೇಳಿದ್ದಾರೆ.
ನನಗೆ ನೋವಾದಾಗಲೆಲ್ಲಾ ಹನುಮಾನ್ ಚಾಲೀಸಾ ಪಠಿಸುತ್ತಿದ್ದೆ, ಆ ಧನಾತ್ಮಕ ಶಕ್ತಿಯೇ ನನ್ನನ್ನು ಕಾಪಾಡಿದೆ. ಸಾಕ್ಷಾತ್ ದೇಶದ ಪ್ರಧಾನಿಯೇ ನನಗೆ ಕರೆ ಮಾಡಿ ಮಾತನಾಡುತ್ತಾರೆ ಎಂದು ನಾನು ಕನಸಿನಲ್ಲೂ ಎಣಿಸಿರಲಿಲ್ಲ ಎಂದು ಭಾವುಕರಾದರು. ನನ್ನ ಮುಂದೆ ಭಾವುಕರಾಗದಿದ್ದರೆ ಇನ್ನೆಲ್ಲಿ ಆಗ್ತೀರಾ?’: ಪ್ರಧಾನಿ ಮೋದಿಯವರ ಪ್ರೀತಿಯ ಸಾಂತ್ವ ಹೇಳಿದ್ದಾರೆ.
ಸ್ಮಿತ್ ಅವರ ತಾಯಿ ಗೀತಾ ಬೆನ್ ಹಾಗೂ ಕುಟುಂಬದ ಹೆಣ್ಣುಮಕ್ಕಳಾದ ಸುನಂದಾ, ಕಲ್ಪನಾ, ಸೋನಲ್ ಅವರ ಧೈರ್ಯವನ್ನು ಶ್ಲಾಘಿಸಿದ ಮೋದಿ, “ಇಂಥ ಕಠಿಣ ಪರಿಸ್ಥಿತಿಯಲ್ಲೂ ನಿಮ್ಮ ಕುಟುಂಬ ತೋರಿದ ಧೈರ್ಯ ದೇಶದ ಹೆಸರನ್ನು ಎತ್ತಿಹಿಡಿದಿದೆ. ನಿಮ್ಮ ತಾಯಿ ಗೀತಾ ಅವರಿಗೆ ನನ್ನ ಪ್ರಣಾಮಗಳು ಎಂದರು.
ಮಾನಸಿಕ ಸ್ಥೈರ್ಯ ಮತ್ತು ಭಾರತೀಯ ಸಂಸ್ಕಾರ: ಜೀವನ್ಮರಣದ ಹೋರಾಟದಲ್ಲಿದ್ದಾಗಲೂ ಸ್ವಂತ ಪ್ರಾಣಕ್ಕಿಂತ ನೂರಾರು ಅಪರಿಚಿತ ಪ್ರಯಾಣಿಕರ ಹಿತವನ್ನು ಮೊದಲು ಕಂಡದ್ದು ಭಾರತೀಯ ಮೌಲ್ಯಗಳ ಪರಮೋಚ್ಛ ನಿದರ್ಶನ. ವಿದೇಶದಲ್ಲಿ ನೆಲಸಿದರೂ ಮನೆಯಲ್ಲಿ ನಿತ್ಯ ಪೂಜೆ, ದೇವರ ಜಪ ಮತ್ತು ಆಧ್ಯಾತ್ಮಿಕ ಶಿಸ್ತನ್ನು ರೂಢಿಸಿಕೊಂಡಿದ್ದೇ ಆ ಭೀಕರ ಕ್ಷಣದಲ್ಲಿ ಸ್ಮಿತ್‌ಗೆ ದೈವಿಕ ಮನೋಬಲ ನೀಡಿತು ಎಂದು ಅವರ ಕುಟುಂಬ ಸ್ಮರಿಸಿದೆ.
ಭಾರತೀಯರು ಎಂದಿಗೂ ಜೀವ ತೆಗೆಯುವವರಲ್ಲ, ಬದಲಿಗೆ ಇತರರ ಜೀವ ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡುವವರು ಎಂಬುದನ್ನು ನೀವು ಇಡೀ ಜಗತ್ತಿಗೆ ಮತ್ತೊಮ್ಮೆ ಸಾಬೀತುಪಡಿಸಿದ್ದೀರಿ ಎಂದು ಪ್ರಧಾನಿ ಹೆಮ್ಮೆಯಿಂದ ಹೇಳಿದರು.
ಹಿಂದೂ ಸನಾತನ ಪರಂಪರೆಯಲ್ಲಿ ಹನುಮಾನ್ ಚಾಲೀಸಾವನ್ನು ‘ಸಂಕಟಮೋಚಕ’ ಸ್ತೋತ್ರವೆಂದು ಪೂಜಿಸಲಾಗುತ್ತದೆ. ಅತ್ಯಂತ ಭೀಕರ ಹಾಗೂ ಮಾರಣಾಂತಿಕ ಸಂಕಷ್ಟದ ವೇಳೆಯಲ್ಲೂ ಧೃತಿಗೆಡದೆ ಪೈಲಟ್ ಸ್ಮಿತ್ ಹನುಮಾನ್ ಚಾಲೀಸಾ ಪಠಿಸಿ ಅಪ್ರತಿಮ ಮನೋಬಲ ಪ್ರದರ್ಶಿಸಿದ್ದು ದೇಶಾದ್ಯಂತ ಲಕ್ಷಾಂತರ ನಾಗರಿಕರ ಹೃದಯ ಗೆದ್ದಿದೆ.
ಸೌದಿ ಅರೇಬಿಯಾದ ತಬುಕ್ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಮಿತ್ ಅವರಿಗೆ ಉನ್ನತ ದರ್ಜೆಯ ವೈದ್ಯಕೀಯ ನೆರವು ಸಿಗುವಂತೆ ಭಾರತೀಯ ವಿದೇಶಾಂಗ ಸಚಿವಾಲಯ ಹಾಗೂ ರಾಯಭಾರ ಕಚೇರಿ ನಿರಂತರ ಕಣ್ಗಾವಲು ಇರಿಸಿದೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಬ್ಬರೂ ಮಚ್ಚರ್ ಅವರ ಈ ಸಾಹಸವನ್ನು ‘9/11 ಮಾದರಿಯ ವೈಮಾನಿಕ ದಾಳಿಯನ್ನು ತಡೆದ ಸಾಹಸ’ ಎಂದು ಬಣ್ಣಿಸಿದ್ದು, ಭಾರತೀಯ ಪೈಲಟ್‌ನ ಸಮಯಪ್ರಜ್ಞೆ ಜಾಗತಿಕ ವಾಯುಯಾನ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ.

























