ಚಿಕ್ಕಮಗಳೂರು: KSRTC ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 5 ದಿನದ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತ ಸಾವನ್ನಪ್ಪಿದ ಘಟನೆ ಶೃಂಗೇರಿ ತಾಲೂಕಿನ ಮೆಣಸೆ ಬಳಿ ನಡೆದಿದೆ.
ಶೃಂಗೇರಿ ತಾಲೂಕಿನ ಕುಂಚೇಬೈಲು ನಿವಾಸಿ ನಾಗರಾಜ್ (32) ಮೃತ ದುರ್ದೈವಿ. ಅಪಘಾತವಾಗುತ್ತಿದ್ದಂತೆ ಡಿಕ್ಕಿಯ ರಭಸಕ್ಕೆ ಬೈಕ್ ಹೊತ್ತಿ ಉರಿದಿದೆ. ಇದರಿಂದ ಬೈಕ್ ಸವಾರನ ದೇಹ ಅರ್ಧಂಬರ್ಧ ಸುಟ್ಟು ಕರಕಲಾಗಿದೆ. ನಾಗರಾಜ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪತ್ನಿ, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಸಾರಿಗೆ ಬಸ್ ಜಯಪುರದಿಂದ ಶೃಂಗೇರಿಗೆ ತೆರಳುತ್ತಿತ್ತು. ಅಪಘಾತದ ಬಳಿಕ ರಸ್ತೆ ಬದಿಯ ಕಂದಕಕ್ಕೆ ಬಸ್ ಇಳಿದಿದೆ. ಅಪಘಾತ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























