ಪುತ್ತೂರು : ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ದ.ಕ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರನ್ನು ಪುತ್ತೂರು ಶಾಸಕ ಅಶೋಕ್ ರೈ ಏಕವಚದಲ್ಲಿ ನಿಂದಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಸಂದರ್ಭದಲ್ಲಿ ಪುತ್ತೂರ ಬಿಜೆಪಿಯ ವ್ಯಾಪಾರ ಪ್ರಕೋಷ್ಠದ ಸಂಚಾಲಕ ಉಜ್ವಲ್ ಪ್ರಭು ಶಾಸಕರ ವಿರುದ್ಧ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಪ್ರಕಟಣೆಯಲ್ಲಿ ಹೇಳಿರುವಂತೆ, ರಾಜಕೀಯದಲ್ಲಿ ಸಂಸ್ಕೃತಿ ಸಂಸ್ಕಾರ ಮುಖ್ಯ. ಪಕ್ಷ ಯಾವುದೇ ಇರಲಿ, ಅಭಿವೃದ್ಧಿಯೇ ಮೊದಲ ಆದ್ಯತೆಯಾಗಿರಬೇಕು. ಆದರೆ ಪುತ್ತೂರಿನಲ್ಲಿ ಇವೆಲ್ಲದಕ್ಕೂ ತದ್ವಿರುದ್ಧವಾಗಿ ಪುತ್ತೂರು ಶಾಸಕರು ತಮ್ಮದೇ ಜಿಲ್ಲೆಯ ವಿರೋಧ ಪಕ್ಷದ ಅಧ್ಯಕ್ಷರನ್ನು ಏಕವಚನದಲ್ಲೇ ನಿಂದಿಸುವ ಕೀಳು ಮಟ್ಟಕ್ಕೆ ತಲುಪಿರುವುದು ವಿಷಾದನೀಯ. ಏಕವಚನ ಬಳಸಿ ನಿಂದಿಸುವುದು ಅವರವರ ಸಂಸ್ಕೃತಿಯನ್ನು ಮತ್ತು ಆ ವ್ಯಕ್ತಿಯ ಯೋಗ್ಯತೆಯನ್ನು ತಿಳಿಸುತ್ತದೆ. ಏಕವಚನ ಬಳಸುವುದು ನಮಗೂ ತಿಳಿದಿದೆ. ಆದರೆ ನಮಗೆ ಸಂಸ್ಕಾರವಿದೆ. ನಮಗೆ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ.
ಎಲ್ಲಾ ಕಡೆಗಳಲ್ಲಿ ತೆಂಗಿನಕಾಯಿ ಒಡೆಯುವುದು ಬಿಟ್ಟರೆ ಕೆಲಸ ಆರಂಭವಾಗಿದ್ದು ಇಲ್ಲಿಯವರೆಗೂ ಕಂಡುಬಂದಿಲ್ಲ. ಅರ್ಧಬರ್ದ ಕೆಲಸವಾದ ಪುತ್ತೂರು ಉಪ್ಪಿನಂಗಡಿ ರೊಡ್ ಇನ್ನು ಪೀನಿಸಿಂಗ್ ಆಗಿಲ್ಲ ಬಾಯಿಯಲ್ಲಿ ರೈಲು ಬಿಡೋದು ಬಿಟ್ಟು ಕೆಲಸ ಮಾಡಿ ಇದೆಲ್ಲಾ ಚುನಾವಣೆಯ ಗಿಮಿಕ್ ತರಹ ಕಾಣುತ್ತದೆ. ಇದನ್ನೆಲ್ಲಾ ನೋಡುವಾಗ ಪುತ್ತೂರಿನಲ್ಲಿ ಛದ್ಮವೇಷ ನಡೆದಂತೆ ಭಾಸವಾಗುತ್ತದೆ ಮತ್ತು ಇದೆಲ್ಲವನ್ನು ಪುತ್ತೂರಿನ ಜನತೆ ಗಮನಿಸುತ್ತಿದ್ದಾರೆ. ಹಾಗಾಗಿ ಮಾತು ಕಡಿಮೆ ಮಾಡಿ, ಅಭಿವೃದ್ಧಿಗೆ ಒತ್ತು ನೀಡಿ. ಇನ್ನಾದರೂ ಸುಸಂಸ್ಕೃತವಾಗಿ ಶಾಸಕರು ನಡೆದುಕೊಳ್ಳುವಂತಾಗಲಿ ಎಂಬುದೇ ನಮ್ಮೆಲ್ಲರ ಆಶಯ ಎಂದು ಉಜ್ವಲ್ ಪ್ರಭು ಆಕ್ರೋಶ ವ್ಯಕ್ತಪಡಿಸಿದ್ದಾರೆ.
























