ಮಂಗಳೂರು: ಹಾಡಹಗಲೇ ಕಾಲೇಜು ಆವರಣದಿಂದಲೇ ವಿದ್ಯಾರ್ಥಿನಿಯೊಬ್ಬಳನ್ನು ಹಲವು ವ್ಯಕ್ತಿಗಳು ಬಲವಂತವಾಗಿ ಎಳೆದೊಯ್ದಿರುವ ಆಘಾತಕಾರಿ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕಣಚೂರು ಮೆಡಿಕಲ್ ಕಾಲೇಜು ಆವರಣದಲ್ಲಿ ಈ ಕೃತ್ಯ ನಡೆದಿದ್ದು, ಅಪಹರಣದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ಅಪಹರಣಕ್ಕೊಳಗಾದ ಯುವತಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಮೆಡಿಕಲ್ ವಿದ್ಯಾರ್ಥಿನಿಯಾಗಿದ್ದು, ಹಿಂದೂ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಆಕೆಯ ಕುಟುಂಬಸ್ಥರೇ ಕಾಲೇಜು ಆವರಣಕ್ಕೆ ಬಂದು ಬಲವಂತವಾಗಿ ಕರೆದೊಯ್ದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಹಲವು ವ್ಯಕ್ತಿಗಳು ಸೇರಿ ವಿದ್ಯಾರ್ಥಿನಿಯನ್ನು ಎಳೆದೊಯ್ದು ಥಾರ್ ವಾಹನಕ್ಕೆ ಹತ್ತಿಸಿಕೊಂಡು ಪರಾರಿಯಾಗುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
ನಗರದ ಖಾಸಗಿ ಕಾಲೇಜೊಂದರ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಲಾಗಿದೆ ಎಂಬ ಆರೋಪದ ಕುರಿತು ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲು, ತನಿಖೆ ನಡೆಸಲು ಮತ್ತು ವಿದ್ಯಾರ್ಥಿನಿಯನ್ನು ಪತ್ತೆಹಚ್ಚಲು ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಶುಕ್ರವಾರ ತಿಳಿಸಿದರು.
ಸಂಬಂಧಪಟ್ಟ ಯುವತಿ ಕಾನೂನುಬದ್ಧವಾಗಿ ವಯಸ್ಕಳಾಗಿರುವುದರಿಂದ, ತಾನು ಎಲ್ಲಿ ವಾಸಿಸಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಆಕೆಗೆ ಇದೆ. ಆಕೆಯ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಕರೆದೊಯ್ಯುವುದು ಅಪರಾಧವಾಗುತ್ತದೆ ಎಂದು ರೆಡ್ಡಿ ಹೇಳಿದರು.
ಘಟನೆ ನಡೆದ ಕೂಡಲೇ ಮಾಹಿತಿ ನೀಡಿದ್ದರೆ, ವಾಹನವು ಹೆಚ್ಚು ದೂರ ಹೋಗುವ ಮೊದಲೇ ಪೊಲೀಸರು ಅದನ್ನು ತಡೆಯಲು ಸಾಧ್ಯವಾಗುತ್ತಿತ್ತು ಎಂದು ಅವರು ಹೇಳಿದರು.

























