ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಷಿನ್ ಲರ್ನಿಂಗ್ ವಿಭಾಗ, ಐಇಇಇ ವಿದ್ಯಾರ್ಥಿ ವಿಭಾಗ, ಸೆಂಟರ್ ಆಫ್ ರೀಸರ್ಚ್ ಎಕ್ಸಲೆನ್ಸ್ ಇದರ ಸಂಯುಕ್ತ ಆಶ್ರಯದಲ್ಲಿ 24 ಗಂಟೆಗಳ ಹ್ಯಾಕಥಾನ್ ಸ್ಪರ್ಧೆ ರೆಸರೆಕ್ಟ್’26 ನ್ನು ದಿನಾಂಕ 27.11.2026 ಶುಕ್ರವಾರ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಷಿನ್ ಲರ್ನಿಂಗ್ ವಿಭಾಗ ಮುಖ್ಯಸ್ಥೆ ಡಾ.ರಾಧಿಕಾ ಶೆಟ್ಟಿ ಮತ್ತು ಮಾಧ್ಯಮ ವಿಭಾಗದ ಸಂಯೋಜಕ ಡಾ.ಆಲ್ಲೆ.ಡಿ.ಸೋಜ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಯುವ ಆವಿಷ್ಕಾರರು, ಉದಯೋನ್ಮುಖ ತಂತ್ರಜ್ಞಾನಾಸಕ್ತರಿಗೆ ತಮ್ಮ ತಾಂತ್ರಿಕ ಕೌಶಲ್ಯಗಳು, ಸೃಜನಶೀಲತೆ ಹಾಗೂ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯನ್ನು ಒರೆಗೆ ಹಚ್ಚಲು ರಾಷ್ಟ್ರೀಯ ವೇದಿಕೆಯನ್ನು ಒದಗಿಸುವ ನಿಟ್ಟಿನಲ್ಲಿ ಇದನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳಲ್ಲಿರುವ ನೂತನ ಯೋಜನೆಗಳನ್ನು ಪ್ರೋತ್ಸಾಹಿಸಲು, ತಂಡವಾಗಿ ಕೆಲಸ ಮಾಡುವ ರೀತಿಯನ್ನು ಉತ್ತೇಜಿಸಲು ಮತ್ತು ಜಗತ್ತಿನ ನೈಜ ಸವಾಲುಗಳಿಗೆ ತಂತ್ರಜ್ಞಾನ ಆಧಾರಿತ ಪ್ರಾಯೋಗಿಕ ಪರಿಹಾರಗಳನ್ನು ಕಂಡುಹಿಡಿಯುವ ರೀತಿಯಲ್ಲಿ ಈ ಹ್ಯಾಕಥಾನ್ ಸ್ಪರ್ಧೆಯನ್ನು ವಿನ್ಯಾಸಗೊಳಿಸಲಾಗಿದೆ. ಈ 24 ಗಂಟೆಗಳಲ್ಲಿ ಭಾಗವಹಿಸುವ ತಂಡಗಳು ನಿರ್ದಿಷ್ಟ ಸಮಸ್ಯೆಗಳಿಗೆ ನವೀನ ಆಲೋಚನೆಗಳ ಮೂಲಕ ತಂತ್ರಜ್ಞಾನ ಅಧಾರಿತ ಪರಿಹಾರಗಳನ್ನು ಕಂಡುಹಿಡಿಯುವ ಕೆಲಸವನ್ನು ಮಾಡಲಿದ್ದಾರೆ ಮತ್ತು ತಮ್ಮ ತಂಡದ ತಾಂತ್ರಿಕ ಜ್ಞಾನ, ಸೃಜನಶೀಲತೆ ಮತ್ತು ನಾವೀನ್ಯತೆಗಳಿಂದ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲಿದ್ದಾರೆ.
ರೆಸರೆಕ್ಟ್’ 26 ಕ್ಕೆ ದೇಶಾದ್ಯಂತ ವಿವಿಧ ಭಾಗಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೂರು ರಾಜ್ಯಗಳ 40 ಕಾಲೇಜುಗಳಿಂದ ಒಟ್ಟು 214 ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿದ್ದವು. ಪ್ರಥಮ ಸುತ್ತಿನ ಪರಿಶೀಲನೆಯ ಬಳಿಕ 42 ತಂಡಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದ್ದು, ಆ ತಂಡಗಳು ಇದರಲ್ಲಿ ಭಾಗವಹಿಸುತ್ತವೆ.
ನವಂಬರ್ 27 ರಂದು ಬೆಳಿಗ್ಗೆ 9 ಗಂಟೆಗೆ ಇದರ ಉದ್ಘಾಟನಾ ಸಮಾರಂಭವು ನಡೆಯಲಿದ್ದು, ಮಂಗಳೂರಿನ ಕಾಕುಂಜೆ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್.ಕೆ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರವಿಕೃಷ್ಣ.ಡಿ.ಕಲ್ಲಾಜೆ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ನವಂಬರ್ 28 ರಂದು ಮಧ್ಯಾಹ್ನ 12 ಗಂಟೆಗೆ ಸಮಾರೋಪ ಸಮಾರಂಭವು ನಡೆಯಲಿದ್ದು, ಬುದ್ಧಾಸ್ ಸ್ಕಿಲ್ ಅಕಾಡೆಮಿ ಇದರ ಮುಖ್ಯ ಕಾರ್ಯನಿರ್ವಣಾಧಿಕಾರಿ ಮತ್ತು ಎನ್ನೋಟೆಕ್ ಅಕಾಡೆಮಿ ಇದರ ಕಾರ್ಪೊರೇಟ್ ವ್ಯವಹಾರಗಳ ಉಪಾಧ್ಯಕ್ಷರು ಹಾಗೂ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಪ್ರಧಾನ್ ನಾಚಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಾರೆ. ಕಾಲೇಜಿನ ಸಂಚಾಲಕ ಪ್ರಸನ್ನ ದರ್ಬೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಜೇತ ತಂಡಗಳಿಗೆ ಪಾರಿತೋಷಕದ ಜತೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ತಂಡಕ್ಕೆ ರೂ.30000 ಹಾಗೂ ದ್ವಿತೀಯ ಸ್ಥಾನ ಗಳಿಸಿದ ತಂಡಕ್ಕೆ ರೂ.20000 ನಗದು ಪುರಸ್ಕಾರವನ್ನು ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮ ಸಂಯೋಜಕ ಪ್ರೊ.ಅಜಯ್ ಶಾಸ್ತ್ರಿ, ಸೆಂಟರ್ ಆಫ್ ರೀಸರ್ಚ್ ಎಕ್ಸಲೆನ್ಸ್‌ನ ಸಂಯೋಜಕ ಪ್ರೊ.ಶ್ರೀನಿಧಿ.ಎ, ಪತ್ರಿಕಾ ಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
























