ಇತ್ತೀಚೆಗಿನ ದಿನಗಳಲ್ಲಿ ಅಥ್ಲೆಟಿಕ್ ಕಾರ್ಯಕ್ಷಮತೆಯನ್ನು ಹೆಚ್ಚಿಸಲು, ಸ್ನಾಯುಗಳ ಬೆಳವಣಿಗೆ ಹೆಚ್ಚಿಸಲು ನೈಸರ್ಗಿಕವಲ್ಲದ ಪ್ರೊಟೀನ್ ಸಪ್ಲಿಮೆಂಟ್ಸ್ ಪೌಡರ್ ಗಳನ್ನು ಅತಿಯಾಗಿ ಸೇವನೆ ಮಾಡಲಾಗುತ್ತಿದೆ. ಈ ಪ್ರೊಟೀನ್ ಸಪ್ಲಿಮೆಂಟ್ ಪೌಡರ್ ಗಳ ಬದಲು ನೈಸರ್ಗಿಕ ಮೂಲಗಳ ಮೂಲಕ ಉತ್ತಮ ಗುಣಮಟ್ಟದ ಪ್ರೊಟೀನ್ ಗಳು ಮತ್ತು ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿರುವ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗಿದೆ.
ಈ ಪ್ರೊಟೀನ್ ಪುಡಿಗಳಲ್ಲಿ ಮೊಟ್ಟೆ, ಹಾಲು ಜೊತೆಗೆ ಸೋಯಾಬೀನ್, ಬಟಾಣಿ ಮತ್ತು ಅಕ್ಕಿಯನ್ನು ಸೇರಿಸಲಾಗುತ್ತದೆ. ಅದಲ್ಲದೇ, ಈ ಪುಡಿಗಳಲ್ಲಿ ಸೇರಿಸಲಾದ ಸಕ್ಕರೆ, ನಾನ್ ಕ್ಯಾಲೋರಿಕ್ ಸ್ವೀಟ್ನರ್, ಕೃತಕ ಫ್ಲೇವರ್ ಗಳನ್ನೂ ಹೊಂದಿರುತ್ತದೆ. ಅತಿಯಾದ ಪ್ರೊಟೀನ್ ಪೌಡರ್‌ಗಳ ದೀರ್ಘಕಾಲದ ಸೇವನೆಯು ಮೂಳೆಗಳಲ್ಲಿ ಸವೆತ ಮತ್ತು ಮೂತ್ರಪಿಂಡದ ಹಾನಿಗೆ ಕಾರಣವಾಗಿದೆ. ಹೀಗಾಗಿ ಈ ಪ್ರೊಟೀನ್ ಸಪ್ಲಿಮೆಂಟ್ಸನ್ನು ಸೇವಿಸುವುದು ಒಳ್ಳೆಯದಲ್ಲ ಎಂದು ತಿಳಿಸಿದೆ.
ಪ್ರೊಟೀನ್ ಮಾಂಸ, ಮೀನು, ಮೊಟ್ಟೆ ಮತ್ತು ಡೈರಿ ಉತ್ಪನ್ನಗಳಲ್ಲಿ ಹೆಚ್ಚಾಗಿರುತ್ತದೆ. ಹೀಗಾಗಿ ಇವುಗಳ ನಿಯಮಿತ ಸೇವನೆಯಿಂದಾಗಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಅಮೈನೋ ಆಮ್ಲಗಳನ್ನು ಪಡೆಯಬಹುದು. ಸಸ್ಯಹಾರಿಗಳು ದ್ವಿದಳ ಧಾನ್ಯಗಳು ಮತ್ತು ಬೀಜಗಳನ್ನು ಸೇವನೆ ಮಾಡುವ ಮೂಲಕ ಪ್ರೊಟೀನನ್ನು ಪಡೆಯಬಹುದು. ಈ ಮೊಟ್ಟೆಯಲ್ಲಿ ಹೆಚ್ಚಿನ ಪ್ರೊಟೀನ್ ಅಂಶವು ಇರುವುದರಿಂದ ದಿನನಿತ್ಯ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗಿದೆ. ಅದಲ್ಲದೇ ದಿನನಿತ್ಯ 80 ಗ್ರಾಂ ಮಾಂಸದೊಂದಿಗೆ 30 ಗ್ರಾಂ ಬೇಳೆಕಾಳುಗಳ ಸೇವನೆ ಸೇರಿರಲಿ ಎಂದು ಐಸಿಎಂಆರ್ ಮಾರ್ಗಸೂಚಿಯಲ್ಲಿ ತಿಳಿಸಿದೆ.