ಕಡಬ ತಾಲೂಕಿನ ಸವಣೂರು ಗ್ರಾಮದ ಬಡ ಕುಟುಂಬವೊಂದರ ಕಣ್ಣೀರಿನ ಕಥೆಗೆ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರು ತಕ್ಷಣ ಸ್ಪಂದಿಸಿ ಮಾನವೀಯತೆಯ ಮಾದರಿಯಾಗಿದ್ದಾರೆ.
ಸವಣೂರು ಗ್ರಾಮದ ತಾಯಿಯೊಬ್ಬರು ಮಗುವಿಗೆ ಜನ್ಮ ನೀಡಿದ್ದು, ನವಜಾತ ಶಿಶು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದೆ. ಆರ್ಥಿಕವಾಗಿ ತೀರ ಹಿಂದುಳಿದ ಕುಟುಂಬವಾಗಿರುವ ಕಾರಣ ಪ್ರತಿದಿನ ಸುಮಾರು 25,000 ಆಸ್ಪತ್ರೆ ವೆಚ್ಚವನ್ನು ಭರಿಸುವುದು ಕುಟುಂಬಕ್ಕೆ ಅಸಾಧ್ಯವಾಗಿತ್ತು. ಇನ್ನೂ ಕೆಲವು ದಿನಗಳ ಕಾಲ ಚಿಕಿತ್ಸೆ ಮುಂದುವರಿಯಬೇಕಿರುವುದರಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು.
ಇದಕ್ಕೂ ಮೀರಿಯಾಗಿ, ಕುಟುಂಬದ ಬಳಿ BPL ಕಾರ್ಡ್ ಇಲ್ಲದ ಕಾರಣ ಸರ್ಕಾರದ ವಿವಿಧ ಆರೋಗ್ಯ ಸೌಲಭ್ಯಗಳು ಮತ್ತು ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗದೆ ವಂಚಿತರಾಗಿದ್ದರು. ಸಂಕಷ್ಟದ ಈ ಸಂದರ್ಭದಲ್ಲಿ ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಕಚೇರಿಯಲ್ಲಿ ಇರುವುದಾಗಿ ತಿಳಿದು, ಕುಟುಂಬದ ಸದಸ್ಯರು ಶಾಸಕರನ್ನು ಭೇಟಿ ಮಾಡಿ ತಮ್ಮ ಅಳಲನ್ನು ತೋಡಿಕೊಂಡರು.
ಕುಟುಂಬದ ಪರಿಸ್ಥಿತಿಯನ್ನು ಆಲಿಸಿದ ಶಾಸಕರು ತಕ್ಷಣವೇ ಸ್ಪಂದಿಸಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ, ಸಂಬಂಧಿಕರ BPL ಕಾರ್ಡ್‌ಗೆ ಕುಟುಂಬದ ಸದಸ್ಯರನ್ನು ಸೇರಿಸುವ ಮೂಲಕ ಚಿಕಿತ್ಸೆಗೆ ಅಗತ್ಯವಿರುವ ಸೌಲಭ್ಯ ದೊರಕುವಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅಲ್ಲದೆ ತಮ್ಮ ಆಪ್ತ ಸಹಾಯಕನನ್ನು ಕುಟುಂಬದೊಂದಿಗೆ ಕಳುಹಿಸಿ ಎಲ್ಲಾ ರೀತಿಯ ಸಹಕಾರ ನೀಡುವಂತೆ ನಿರ್ದೇಶಿಸಿದರು.
ಶಾಸಕರ ನೇರ ಹಸ್ತಕ್ಷೇಪ ಮತ್ತು ಅಧಿಕಾರಿಗಳ ತ್ವರಿತ ಕಾರ್ಯಾಚರಣೆಯಿಂದ ಕೇವಲ ಒಂದು ಗಂಟೆಯೊಳಗೆ BPL ಕಾರ್ಡ್ ವ್ಯವಸ್ಥೆ ಮಾಡಿಕೊಡಲಾಗಿದ್ದು, ಕುಟುಂಬಕ್ಕೆ ಚಿಕಿತ್ಸಾ ಸೌಲಭ್ಯ ಪಡೆಯುವ ದಾರಿ ಸುಗಮವಾಯಿತು.
ಸಂಕಷ್ಟದಲ್ಲಿದ್ದ ಬಡ ಕುಟುಂಬಕ್ಕೆ ಸಮಯೋಚಿತ ನೆರವು ನೀಡಿದ ಶಾಸಕರ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಜನಪ್ರತಿನಿಧಿಯೊಬ್ಬರು ಹೇಗೆ ಜನರ ನೋವಿಗೆ ಸ್ಪಂದಿಸಬೇಕು ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ. ಜನರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಅಶೋಕ್ ಕುಮಾರ್ ರೈ ಅವರ ಕಾರ್ಯವೈಖರಿ ಮತ್ತೊಮ್ಮೆ ಜನಮನ ಗೆದ್ದಿದೆ.
























