ಭೂಮಿಯನ್ನು ಧರಿಸಿರುವುದು ಸರ್ಪವೇ ಆಗಿದೆ. ಆದಿಶೇಷನ್ನು ಈ ಭೂಮಿಯನ್ನು ಹೊತ್ತಿದ್ದಾನೆ ಎನ್ನುತ್ತದೆ ಪುರಾಣಗಳು. ಭೂಮಿಯನ್ನು ರಕ್ಷಿಸಬೇಕಾದರೆ ಭೂಮಿಯನ್ನು ಹೊತ್ತ ಸರ್ಪಗಳ ರಾಜನನ್ನು ಪೂಜಿಸಬೇಕು. ಆದಿಶೇಷನು ವಿಷ್ಣುವಿನ ವಾಹನವೂ ಹೌದು. ವಿಷ್ಣುವು ವಿಶ್ವದ ರಕ್ಷಕನೂ ಹೌದು. ಆದ್ದರಿಂದ ಆದಿಶೇಷನೂ ವಿಷ್ಣುವಿಗೂ ಭೂಮಿಗೂ ಅವಿನಾಭಾವ ಸಂಬಂಧ.
ಚಂದ್ರನ ವೃದ್ಧಿಯಾಗುವ ಮತ್ತು ಅಥವಾ ಕ್ಷೀಣಿಸುವ ಹದಿನೈದು ದಿನಗಳಲ್ಲಿ ಪಂಚಮಿ ಐದನೇ ದಿನವಾಗಿದೆ. ಸರ್ಪ ಪೂಜೆಯ ಈ ವಿಶೇಷ ದಿನವು ಯಾವಾಗಲೂ ಚಂದ್ರನ ಹಿಂದೂ ತಿಂಗಳ ಶ್ರಾವಣ ಜುಲೈ ಆಗಸ್ಟ್‌ನಲ್ಲಿ ಚಂದ್ರನ ಕ್ಷೀಣತೆಯ ಐದನೇ ದಿನದಂದು ಬರುತ್ತದೆ. ಆದ್ದರಿಂದ ಇದನ್ನು ನಾಗ ಪಂಚಮಿ ಎಂದು ಕರೆಯಲಾಗುತ್ತದೆ.
ಕರಾವಳಿ ಪ್ರದೇಶದಾದ್ಯಂತ ಕಂಡುಬರುವ ವಿಶಿಷ್ಟ ‘ನಾಗಬನ’ಗಳು ಆ ಪ್ರದೇಶದಲ್ಲಿ ವ್ಯಾಪಕವಾಗಿ ಹರಡಿದ್ದ ನಾಗಾರಾಧನೆಗೆ ಸಾಕ್ಷಿಯಾಗಿವೆ. ಗಿಡಮರಗಳಿರುವ ತೋಪಿನಲ್ಲಿ ‘ನಾಗಶಿಲೆ’ಯನ್ನು ಪ್ರತಿಷ್ಠಾಪಿಸಿ ಆ ಜಾಗವನ್ನು ‘ನಾಗಬನ’ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನಾಗಬನದಲ್ಲಿ ವಟ, ಅಶ್ವತ್ಥ , ಬೈಣೆ ಮುಂತಾದ ಮರಗಳಿರಬೇಕೆಂಬ ನಿಯಮವಿದೆ. ಕರ್ಣಾಟಕ ಬಯಲುನಾಡಿನಲ್ಲಿಯೂ ಇಂಥ ನಾಗಬನಗಳನ್ನು ಕಾಣಬಹುದು. ಆ ಪ್ರದೇಶಗಳಲ್ಲಿ ಅವುಗಳನ್ನು ‘ನಾಗರಕಲ್ಲು’ ಎಂದು ಕರೆಯಲಾಗುತ್ತದೆ. ಅರಳೀಮರದ ಕಟ್ಟೆ ಯಲ್ಲಿ ಪ್ರತಿಷ್ಠಾಪಿಸಲಾಗಿರುವ ಇಂತಹ ಸಾವಿರಾರು ನಾಗರಕಲ್ಲುಗಳನ್ನು ನಾವು ಕಾಣಬಹುದು. ಈ ಮೂಲಕ ವೃಕ್ಷಕ್ಕೂ ನಾಗನಿಗೂ ಇರುವ ಅವಿನಾಭಾವ ಸಂಬಂಧ ಕೂಡ ವ್ಯಕ್ತವಾಗುತ್ತದೆ
ನಾಗದೇವತೆಯನ್ನು ಲೌಕಿಕ ಹಾಗು ಅಲೌಕಿಕ ಉನ್ನತಿಗೆ ಪೂಜಿಸುತ್ತಾರೆ. ಲೌಕಿಕವಾಗಿ ಸಂತಾನ, ಸುಖ, ಸಂಪತ್ತಿಗೆ ಮೂಲ ಕಾರಣ ಸರ್ಪವಾಗಿದೆ. ನಾಗದೇವರ ಅನುಗ್ರಹದಿಂದ ಸಂತಾನ ದೋಷವು ನಿವಾರಣೆಯಾಗಿ ವಂಶವು ಮುಂದುವರಿಯಲು ಸಹಾಯಕವಾಗಲಿದೆ. ಹಾಗೆಯೇ ವರ್ಷ ಋತುವಿನ ಆರಂಭವೂ ಆದ ಕಾರಣ ಮಳೆಯಲ್ಲಿ ಉತ್ಪತ್ತಿಯಾಗುವ ವಿಷಜಂತುಗಳಿಂದ ಮನುಷ್ಯನ ಮೇಲೆ, ಆಹಾರ ಮುಂತಾದ ವಸ್ತುಗಳ ಮೇಲೆ ದುಷ್ಪರಿಣಾಮ ಬೀರಬಾರದು ಎಂಬುದಾಗಿದೆ. ಇವು ಲೌಕಿಕ ಉದ್ದೇಶವಾದರೆ, ಅಲೌಕಿಕವಾದ ಉದ್ದೇಶವೂ ಬೇರೆ ಇದೆ. ಅಧ್ಯಾತ್ಮ ಸಾಧಕರಿಗೆ ನಾಗರ ಪಂಚಮೀ ಬಹಳ ಫಲಕಾರಿ.
ಮನುಷ್ಯ ದೇಹದಲ್ಲಿ ಕುಂಡಲಿನೀ ಎನ್ನುವ ಶಕ್ತಿ ಇದೆ. ಅದು ಸರ್ಪವನ್ನು ಹೋಲುವಂತಹ ಶಕ್ತಿಯಾಗಿದೆ. ಇದೇ ಮನುಷ್ಯನ ಜೀವಾಳ. ಅದು ಸುಪ್ತವಾಗಿದ್ದರೆ, ಲೌಕಿಕ ಸುಖವನ್ನೂ ಜಾಗರೂಕವಾಗಿದ್ದಾರೆ ಅಲೌಕಿಕ ಸುಖವನ್ನೂ ಅನುಭವಿಸಲು ಸಾಧ್ಯ. ಇಂತಹ ಅಲೌಕಿಕ ಸುಖವನ್ನು ಪಡೆಯಲೂ ನಾಗದೇವತೆಯನ್ನು ಪ್ರಸನ್ನಗೊಳಿಸಬೇಕಾಗುವುದು. ಆ ಮೂಲಕ ಅಧ್ಯಾತ್ಮ ಸಾಧನೆಗೆ ಪುಷ್ಟಿ ಲಭಿಸುವುದು. ಮಳೆಗಾಲವಾದ ಕಾರಣ ಬಾಹ್ಯ ಚಟುವಟಿಕೆಗಳು ಕಡಿಮೆಯಾಗಿ ಅಧ್ಯಾತ್ಮದ ಕಡೆ ಹೆಚ್ಚು ಗಮನಕೊಡಲು ಅನುಕೂಲಕರವಾಗಿದೆ. ಹೀಗೆ ಎರಡು ಉದ್ದೇಶದಿಂದ ನಾಗದೇವರಿಗೆ ಪೂಜೆಯನ್ನು ಪ್ರಾಚೀನ ಕಾಲದಿಂದ ನಡೆಸಿಕೊಂಡು ಬಂದಿದ್ದಾರೆ.