ಮಂಗಳೂರಿನ ಚಾಕು, ಕಾರದಪುಡಿ ಇಟ್ಕೊಂಡು ಕತ್ತಲಲ್ಲಿ ಕಾದು ಕುಳಿತಿದ್ದ ಖದೀಮರು, ಹೆಡೆಮುರಿ ಕಟ್ಟಿದ ಕಾರವಾರ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ಗರುಡಾ ಗ್ಯಾಂಗ್‌ನ ಮೂವರನ್ನು ಚಾಕು, ಕಾರದಪುಡಿ ಸೇರಿದಂತೆ ಇನ್ನಿತರ ವಸ್ತುಗಳ ಸಹಿತ ಹೆಡೆಮುರಿಕಟ್ಟುವಲ್ಲಿ ಭಟ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ. ತಪ್ಪಿಸಿಕೊಂಡಿರುವ ಇನ್ನಿಬ್ಬರ ಪತ್ತೆಗಾಗಿ ಬಲೆ ಬೀಸಲಾಗಿದೆ.
ಮಂಗಳೂರು ಚೊಕ್ಕಬೆಟ್ಟು ರಸ್ತೆಯ ಜಲೀಲ್ ಹುಸೈನ್, ಭಟ್ಕಳದ ಹೆಬಳೆಯ ಗಾಂಧಿನಗರದ ವೃತ್ತಿಯಲ್ಲಿ ಚಾಲಕನಾದ ನಾಸೀರ್ ಹಕೀಮ್ ಎಂಬವರನ್ನು ಬಂಧಿಸಲಾಗಿದೆ. ಇವರಲ್ಲಿ, ಜಲೀಲ್ ಮೇಲೆ ಈಗಾಗಲೇ 11 ಪ್ರಕರಣಗಳು ಹಾಗೂ ನಾಸೀರ್ ವಿರುದ್ಧ 02 ಕೇಸ್ ದಾಖಲಾಗಿವೆ. ಮತ್ತೋರ್ವ ಆರೋಪಿ ಬಾಲಕನಾಗಿದ್ದು, ಈತನ ಮೇಲೆ ಒಂದು ಪ್ರಕರಣವಿದೆ. ಉಳಿದಂತೆ ಕಾರಿನಲ್ಲಿದ್ದ ಇತರ ಇಬ್ಬರು ಪೊಲೀಸರನ್ನು ಕಂಡು ಓಡಿ ಹೋಗಿದ್ದಾರೆ. ಅವರನ್ನ ಮಗ್ಗಂ ಕಾಲೋನಿಯ ಜೀಶಾನ್ ಹಾಗೂ ಬಟ್ಟಾಗಾಂವ ನಿವಾಸಿ ನಬೀಲ್ ಎಂದು ಗುರುತಿಸಲಾಗಿದೆ. ಪರಾರಿಯಾದವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಭಟ್ಕಳದ ಬಿಲಾಲಖಂಡ ಗ್ರಾಮದ ಸಾಗರ ರಸ್ತೆಯ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ಬೆಳಗಿನ ಜಾವ 03 ಗಂಟೆ ಸುಮಾರಿಗೆ ಈ ಐವರು ಆರೋಪಿತರು ದರೋಡೆ ಮಾಡಲು ಸಂಚು ರೂಪಿಸಿದ್ದರು. ಇನ್ನೊವಾದಲ್ಲಿ ಬಂದಿದ್ದ ಇವರು ಹೊಂಚು ಹಾಕಿಕೊಂಡು ಗುಳ್ಳಿ ರಸ್ತೆ ಕ್ರಾಸ್ ಹತ್ತಿರ ಕತ್ತಲೆಯಲ್ಲಿ ಕಾರಿನಲ್ಲಿಯೇ ಕುಳಿತಿದ್ದರು. ಆಗ ಅದೇ ಮಾರ್ಗದಲ್ಲಿ ಬಂದ ಭಟ್ಕಳ ಗ್ರಾಮೀಣ ಠಾಣೆ ಪಿಎಸ್‌ಐ ರನ್ನಗೌಡ ಪಾಟೀಲ್ ಹಾಗೂ ಸಿಬ್ಬಂದಿ ಆರೋಪಿತರನ್ನು ನೋಡಿ ಅನುಮಾನಗೊಂಡು ವಿಚಾರಿಸಲು ಮುಂದಾದಾಗ, ತಪ್ಪಿಸಿಕೊಳ್ಳಲು ಕಾರನ್ನು ಹಿಮ್ಮುಖವಾಗಿ ಚಲಾಯಿಸಿದ್ದರು. ಆದರೆ ಕಾರು ನಿಯಂತ್ರಣ ತಪ್ಪಿ ಗಟಾರಿನಲ್ಲಿ ಬಿದ್ದಿದೆ. ಆಗ ಗರುಡಾ ಗ್ಯಾಂಗ್‌ನ ಮೂವರು ಸಿಕ್ಕಿಬಿದ್ದಿದ್ದಾರೆ. ಇನ್ನುಳಿದ ಇಬ್ಬರು ಆರೋಪಿತರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿದ್ದ ಚಾಕು, ಕಾರದ ಪುಡಿ, ಮಂಕಿಕ್ಯಾಪ್, ಬೆಲ್ಟ್, ತಾಡಪತ್ರೆ ಸೇರಿ ಇತರ ವಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಲಂ 310(4), 310(5), ಬಿಎನ್ಎಸ್-2023 ಅಡಿ ಪ್ರಕರಣ ದಾಖಲಾಗಿದೆ.