ಬೆಂಗಳೂರು : ಪ್ರಸ್ತುತ ವಿಧಾನಸಭೆ ಚುನಾವಣೆ ನಡೆದರೆ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೈದರಾಬಾದ್ ಮೂಲದ ‘ಪೀಪಲ್ಸ್ ಪಲ್ಸ್ ಆರ್ಗನೈಸೇಶನ್’ ಮತ್ತು ‘ಕೊಡೆಮೊ ಟೆಕ್ನಾಲಜೀಸ್’ ನಡೆಸಿದ ಸಮೀಕ್ಷಾ ವರದಿ ತಿಳಿಸಿದೆ. ಕಾಂಗ್ರೆಸ್ ಎರಡನೇ ಹಾಗೂ ಜೆಡಿಎಸ್ ಮೂರನೇ ಸ್ಥಾನ ಪಡೆಯಲಿವೆ. ಆದಾಗ್ಯೂ, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರೇ ಸೂಕ್ತ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಹೆಚ್ಚಿನವರು ತಿಳಿಸಿದ್ದಾರೆ.
ಏಪ್ರಿಲ್ 15 ರಿಂದ ಮೇ 18 ರ ಅವಧಿಯಲ್ಲಿ ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ 10,481 ಮಂದಿ ಭಾಗವಹಿಸಿದ್ದರು. ಈ ಪೈಕಿ ಬಿಜೆಪಿ 136-159 ಸ್ಥಾನಗಳನ್ನು ಗಳಿಸುವ ಮೂಲಕ ಕರ್ನಾಟಕದಲ್ಲಿ ಮೊದಲ ಬಾರಿಗೆ ಪೂರ್ಣ ಬಹುಮತದೊಂದಿಗೆ ಅಧಿಕಾರ ವಹಿಸಿಕೊಳ್ಳಲಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷವು 62-82 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದು, 2023 ರಲ್ಲಿ ಗಳಿಸಿದ್ದ ಮತಗಳ ಪ್ರಮಾಣಕ್ಕಿಂತ ಕಡಿಮೆ ದೊರೆಯಲಿದೆ. 2023 ರಲ್ಲಿ ಕಾಂಗ್ರೆಸ್ ಮತ ಹಂಚಿಕೆ ಶೇಕಡಾ 42.88 ಇದ್ದರೆ, ಸಮೀಕ್ಷೆಯ ಪ್ರಕಾರ ಈಗ ಶೇಕಡಾ 40.3 ರಷ್ಟು ಮತ ಹಂಚಿಕೆ ಇರಲಿದೆ. ಇದು ಕಾಂಗ್ರೆಸ್ ಪಕ್ಷವು ಗಮನಾರ್ಹ ಆಡಳಿತವಿರೋಧಿ ಅಲೆ ಎದುರಿಸುತ್ತಿರುವುದನ್ನು ಸೂಚಿಸಿದೆ ಎಂದು ಸಮೀಕ್ಷೆ ಹೇಳಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷಾತೀತವಾಗಿ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಮುಖವಾಗಿ ಉಳಿದಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಭಾಗವಹಿಸಿದ ಶೇಕಡಾ 29.2 ರಷ್ಟು ಮಂದಿ ಸಿದ್ದರಾಮಯ್ಯ ಪರ ಒಲವು ವ್ಯಕ್ತಪಡಿಸಿದ್ದರೆ, ಶೇಕಡಾ 10.7 ರಷ್ಟು ಮಂದಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಪರ ಶೇ. 5.5, ಬಸವರಾಜ ಬೊಮ್ಮಾಯಿ ಪರ ಶೇ 3.6, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪರ ಶೇ 5.2 ಮಂದಿ ಒಲವು ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಯಾರೊಬ್ಬರೂ ಈ ವಿಚಾರದಲ್ಲಿ ಎರಡಂಕಿ ಗಡಿ ದಾಟದಿದ್ದರೂ ‘ಮುಖ್ಯಮಂತ್ರಿ ಗಾದಿಗೆ ಬಿಜೆಪಿಯ ಯಾವ ಅಭ್ಯರ್ಥಿಯಾದರೂ ಒಕೆ’ ಎಂದು ಶೇ 16.9 ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.
ಕಳೆದ 20 ವರ್ಷಗಳಿಂದ ಬಿಜೆಪಿ ಕರ್ನಾಟಕ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೋ ನಿಜ. ಮೂರು ಬಾರಿ (2004, 2008, 2018) ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದೂ ನಿಜ. ಆದರೆ, ಒಟ್ಟು 224 ಸ್ಥಾನಗಳಲ್ಲಿ 113 ಸ್ಥಾನಗಳ ಮ್ಯಾಜಿಕ್ ಸಂಖ್ಯೆಯನ್ನು (ಸರಳ ಬಹುಮತ) ದಾಟಿ ಅಧಿಕಾರ ಪಡೆಯುವುದು ಅದಕ್ಕೆ ಎಂದಿಗೂ ಸಾಧ್ಯವಾಗಿಲ್ಲ. ಆದರೆ, ಈ ಬಾರಿಯ ಸಮೀಕ್ಷೆ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವ ಸುಳಿವು ನೀಡಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ 48.4 ರಷ್ಟು ಜನರು ಕಾಂಗ್ರೆಸ್ ಆಡಳಿತ ತುಂಬಾ ಚೆನ್ನಾಗಿದೆ ಅಥವಾ ಚೆನ್ನಾಗಿದೆ ಎಂದು ಹೇಳಿದ್ದು, ಉಳಿದ ಶೇ 51.6 ರಷ್ಟು ಜನರು ಅದು ಸರಾಸರಿ, ಕೆಟ್ಟದು ಅಥವಾ ತುಂಬಾ ಕೆಟ್ಟದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.