ಮಂಗಳೂರು: ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಉಳ್ಳಾಲ ತಾಲೂಕಿನ ಎರಡು ಕಡೆ ಎರಡು ಮನೆಗಳ ಮೇಲೆ ಗುಡ್ಡ ಕುಸಿತ ಸಂಭವಿಸಿದೆ. ಮೋಂಟೆಪದವು ಬಳಿ ಐವರು ಗುಡ್ಡ ಕುಸಿತದಲ್ಲಿ ಸಿಲುಕಿದ್ದು, ಆ ಪೈಕಿ ಇಬ್ಬರನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ. ಮತ್ತೊಂದೆಡೆ, ದೇರಳೆಕಟ್ಟೆಯಲ್ಲಿ ಕಂಪೌಂಡ್ ಗೋಡೆ ಮನೆ ಮೇಲೆ ಕುಸಿದು ಬಿದ್ದು ಫಾತಿಮಾ ನಯೀಮ (6) ಎನ್ನುವ ಮಗು ಮೃತಪಟ್ಟಿದೆ. ಮೊದಲಿಗೆ ಗಂಭೀರ ಸ್ಥಿತಿಯಲ್ಲಿದ್ದ ಫಾತಿಮಾ ನಯೀಮಳನ್ನು ರಕ್ಷಣೆ ಮಾಡಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಆಕೆ ಮೃತಪಟ್ಟಿದ್ದಾಳೆ.
ಅಗ್ನಿ ಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯರು ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಮಗುವನ್ನು ರಕ್ಷಣೆ ಮಾಡಿದ್ದರು. ಸದ್ಯ ಮೋಂಟೆಪದವು ಬಳಿ ಮೂವರ ರಕ್ಷಣೆಗಾಗಿ ಕಾರ್ಯಾಚರಣೆ ಪ್ರಗತಿಯಲ್ಲಿದೆ.ಭಾರಿ ಮಳೆಯ ಪರಿಣಾಮ ಮಂಗಳೂರು ಸುತ್ತಮುತ್ತಲಿನ ಲವು ಪ್ರದೇಶಗಳು ಜಲಾವೃತಗೊಂಡಿವೆ. ಉಳ್ಳಾಲ, ಕಲ್ಲಾಪು, ಬಗಂಬಿಲ, ಪಿಲಾರ್, ಅಂಬಿಕಾರಸ್ತೆ, ಕೋಟೆಕಾರು, ತಲಪಾಡಿ, ಪಾವೂರು, ಹರೇಕಳ, ಉಳಿಯ ಪ್ರದೇಶಗಳು ಜಲಾವೃತವಾಗಿವೆ.