ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನೆಫೀಸರವರ ವಿರುದ್ಶ ಗ್ರಾಮಸಭೆಯಲ್ಲಿ ಗ್ರಾಮಸ್ಥರಿಂದ ಅವ್ಯವಹಾರ ಆರೋಪ
ಪೆರುವಾಯಿ: ಸ್ವಾತಂತ್ರ್ಯೋತ್ಸವಕ್ಕೆ ದೆಹಲಿಯಿಂದ ಆಹ್ವಾನ ಸ್ವೀಕರಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಗ್ರಾಮಸ್ಥರಿಂದ ಅವ್ಯವಹಾರದ ಆರೋಪ ಕೇಳಿ ಬಂದು ಗ್ರಾಮಸಭೆಯಲ್ಲಿ ಈ ಬಗ್ಗೆ ಭಾರೀ ಚರ್ಚೆಯಾದ ಘಟನೆ ದ. ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿಯಲ್ಲಿ ನಡೆದಿದೆ.
ಪೆರುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಗ್ರಾಮಸಭೆಯು ಸೆ. 12 ನೇ ಗುರುವಾರದಂದು ನಡೆದಿದ್ದು, ಈ ಸಭೆಯಲ್ಲಿ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನೆಫೀಸಾರವರ ವಿರುದ್ಧ ಅವ್ಯವಹಾರದ ಆರೋಪ ಕೇಳಿ ಬಂದಿದೆ.
ದೆಹಲಿಗೆ ತೆರಳಲು ಪಂಚಾಯತ್ ಹಣ ಖರ್ಚು ಮಾಡಿದ್ದಾರೆ ಎಂದು ಕೆಲ ಗ್ರಾಮಸ್ಥರು ಆರೋಪ ಮಾಡಿದ್ದರು. ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು. ಈ ಕುರಿತಾಗಿ ಸಭೆಯಲ್ಲಿ ಹಂಚಲಾಗಿದ್ದ ಪಂಚಾಯತ್ ಖರ್ಚು ವೆಚ್ಚದ ಪತ್ರದಲ್ಲಿ ಕೆಲವೊಂದು ಕ್ರಮ ಸಂಖ್ಯೆಗಳು ಮಾಯವಾಗಿದ್ದು, ಇದೇ ವಿಚಾರ ಗ್ರಾಮಸ್ಥರ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಈ ಕ್ರಮ ಸಂಖ್ಯೆಗಳು ಹೇಗೆ ಮಾಯವಾಯಿತು ಎಂದು ಗ್ರಾಮಸ್ಥ ಯತೀಶ್ ಪೆರುವಾಯಿ ಹಾಗೂ ಇನ್ನಿತರರು ಅಧ್ಯಕ್ಷರ ಬಳಿ ಪ್ರಶ್ನೆ ಮಾಡಿದಾಗ.. ಈ ಬಗ್ಗೆ ಅಧ್ಯಕ್ಷರು ಕೆಂಡಾಮಂಡಲವಾಗಿದ್ದು, ’ನಾನು ರಾಜಕೀಯಕ್ಕೆ ಬಂದದ್ದು ಅವ್ಯವಹಾರ ನಡೆಸಲು ಅಲ್ಲ, ಗ್ರಾಮದ ಅಭಿವೃದ್ಧಿಗಾಗಿ, ಅಂತಹ ಒಂದು ರೂಪಾಯಿಯ ಅವ್ಯವಹಾರ ನಡೆದಿದ್ದರೂ ನಾನು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಯತೀಶ್ ಪೆರುವಾಯಿರವರು ನೀವು ಒಂದು ರೂಪಾಯಿ ಖಂಡಿತವಾಗಿಯೂ ಅವ್ಯವಹಾರ ಮಾಡಿದಲ್ಲ ಲಕ್ಷಕ್ಕೂ ಅಧಿಕ ಮೊತ್ತವನ್ನು ಅವ್ಯವಹಾರ ಮಾಡಿದ್ದೀರಿ.ಗ್ರಾಮಸಭೆಯಲ್ಲಿ ಅಧಿಕಾರಿಗಳು ನೀಡಿದ ವರದಿ ಪತ್ರದಲ್ಲಿ ಸುಮಾರು ಐವತ್ತಕ್ಕೂ ಅಧಿಕ ಖರ್ಚು ಮಾಡಿದ್ದ ಲೆಕ್ಕಾಚಾರವನ್ನು ಕಿತ್ತು ಹಾಕಲಾಗಿದ್ದು ಹಾಗೂ ಅದೇ ಪತ್ರದಲ್ಲಿ 20 ಕ್ಕೂ ಹೆಚ್ಚು ಕ್ರಮ ಸಂಖ್ಯೆ ವ್ಯತ್ಯಾಸ ಆಗಿದ್ದು ಅವ್ಯವಹಾರ ನಡೆದಿರುವ ಕಾಮಗಾರಿಯ ವಿವರಗಳನ್ನು ಕಿತ್ತು ಹಾಕಲಾಗಿದೆ. ಆದರೆ ನಾವು ಈ ಬಗ್ಗೆ ಸಾಕ್ಷಿ ಸಮೇತ ಅವ್ಯವಹಾರವನ್ನು ಬಯಲು ಮಾಡುತ್ತೇವೆ. ನಮ್ಮಲ್ಲಿ ಇರುವ ಸಾಕ್ಷ್ಯಾಧಾರಗಳನ್ನು ಮುಂದಿಟ್ಟು ನಾವು ಅಧ್ಯಕ್ಷರಲ್ಲಿ ಪ್ರಶ್ನೆ ಮಾಡಿದ್ದೇವೆ. ಆದರೆ ಅಧ್ಯಕ್ಷರು ಈ ಬಗ್ಗೆ ಯಾವುದೇ ರೀತಿಯ ಸತ್ಯಾಸತ್ಯೆಗಳ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಈ ವಿಚಾರವಾಗಿ ತನಿಖೆ ಆಗಬೇಕು ಹಾಗೂ ನೀವು ನಮಗೆ ಕೊಟ್ಟಿರುವ ವರದಿ ಅಧಿಕೃತವಾಗಿದ್ದರೆ ನೀವು ಸಹಿ ಹಾಕಿ ನೀಡಿ ಎಂದು ಕೇಳಿಕೊಂಡಾಗ ಸಹಿ ಹಾಕಲು ಹಿಂದೇಟು ಹಾಕಿದರು. ಈ ಸಮಯದಲ್ಲಿ ನೋಡಲ್ ಅಧಿಕಾರಿಯಾಗಿ ಬಂದಿರುವ ತಾಲೂಕು ಆರೋಗ್ಯ ಅಧಿಕಾರಿಯಾದ ಅಶೋಕ್ ಕುಮಾರ್ ರೈ ಯವರು ಅವ್ಯವಹಾರ ನಡೆಯದೇ ಇದ್ದರೆ ನಿಮಗೆ ಸಹಿ ಹಾಕಲು ಯಾಕೆ ಹೆದರಿಕೆ ನೀವು ಸಹಿ ಹಾಕಿ ಎಂದು ವಿನಂತಿಸಿದ್ದಾಗ ಅಧ್ಯಕ್ಷರು ಸಹಿ ಹಾಕಲು ಒಪ್ಪದೇ ಇರುವುದನ್ನು ನಿರ್ಣಯ ಪುಸ್ತಕದಲ್ಲಿ ಬರೆಯುವುದಕ್ಕೆ ಹೇಳಿದರು.ಯಾವುದೇ ಪ್ರಶ್ನೆಗೆ ಉತ್ತರ ಕೊಡಲು ಸಾಧ್ಯವಿಲ್ಲದ ಅಧ್ಯಕ್ಷರ ಪರವಾಗಿ ಬಂದಿರುವ ಕೆಲವೊಂದಷ್ಟು ಜನರು ಗದ್ದಲ ಎಬ್ಬಿಸಿ ಚರ್ಚೆಯ ವಿಷಯಾಂತರ ಮಾಡಲು ಪ್ರಯತ್ನಿಸುವ ಉದ್ದೇಶದಿಂದ ಅವ್ಯವಹಾರ ಆರೋಪ ಮಾಡಿದವರ ವಿರುದ್ಧವೇ ಕೈ ಮಾಡುವ ಮಟ್ಟಕ್ಕೂ ಇಳಿದರು. ಈ ಸಂದರ್ಭದಲ್ಲಿ ಅಲ್ಲೆ ಇದ್ದ ಪೊಲೀಸ್ ಸಿಬ್ಬಂದಿ ನಿಯಂತ್ರಿಸಿದರು.
ಪಂಚಾಯತ್ ಉಪಾಧ್ಯಕ್ಷೆಯಾಗಿ ಕಸ ವಿಲೇವಾರಿ ವಾಹನವನ್ನು ತಾನೇ ಚಲಾಯಿಸಿ, ಇದೀಗ ಪಂಚಾಯತ್ ಅಧ್ಯಕ್ಷೆಯಾಗಿ ದೆಹಲಿಯಲ್ಲಿ ನಡೆದ ಸ್ವಾತಂತ್ರೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿದ್ದರು. ನಫೀಸಾ ಅವರ ಸೇವೆಯನ್ನು ಪ್ರಧಾನಿ ಕಾರ್ಯಾಲಯವೇ ಗುರುತಿಸಿ ಅವರಿಗೆ ಸ್ವಾತಂತ್ರ್ಯೋತ್ಸವದ ಗೌರವ ನೀಡಿತ್ತು. ಜೊತೆಗೆ ಕೇಂದ್ರ ಹಣಕಾಸು ಆಯೋಗದ ಸಭೆಗೂ ವಿಶೇಷ ಆಹ್ವಾನ ಇವರಿಗೆ ಸಿಕ್ಕಿದೆ. ಆದ್ರೆ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡ ನೆಫೀಸಾರವರ ಬಗ್ಗೆ ಇದೀಗ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅವ್ಯವಹಾರದ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಗ್ರಾಮಸ್ಥರಲ್ಲಿ ಭಾರೀ ಕುತೂಹಲ ಮೂಡಿಸಿದೆ.