ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಆದ ಬೆನ್ನಲ್ಲೇ, ರಾಜಕೀಯ ರಂಗೇರಿದೆ. ಅದರಲ್ಲೂ ಇಂದು ಶಿಗ್ಗಾಂವಿ ಮತ್ತು ಸಂಡೂರಿಗೆ ಅಭ್ಯರ್ಥಿಗಳನ್ನು ಬಿಜೆಪಿ ಹೈಕಮಾಂಡ್ ಪ್ರಕಟಿಸಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಶಿಗ್ಗಾಂವಿ ಮತ್ತು ಸಂಡೂರು ಬಂಗಾರು ಹನುಮಂತುಗೆ ಟಿಕೆಟ್ ನೀಡಲಾಗಿದೆ. ಆದರೆ ಹೈವೋಲ್ಟೇಜ್ ಕ್ಷೇತ್ರವಾಗಿರುವ ಚನ್ನಪಟ್ಟಣದಲ್ಲಿ ಕದನ ಮತ್ತಷ್ಟು ಕುತೂಹಲ ಕೆರಳಿಸಿದೆ.
ನವೆಂಬರ್ 13ರಂದು ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಂಗಾರು ಹನುಮಂತುಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿದೆ. ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿ ಇ.ತುಕಾರಾಮ್ ಆಯ್ಕೆಯಾಗಿದ್ದರು. ಶಾಸಕ ಸ್ಥಾನಕ್ಕೆ ತುಕಾರಾಮ್ ರಾಜೀನಾಮೆ ನೀಡಿದ್ದರು. ಹೀಗಾಗಿ ಸಂಡೂರು ಕ್ಷೇತ್ರ ತೆರವಾಗಿತ್ತು.
ಸಂಡೂರು ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಬಂಗಾರು ಹನುಮಂತು, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷರಾಗಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಸಂಡೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದೀಗ ಬೈಎಲೆಕ್ಷನ್ನಲ್ಲಿ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.