ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಡಾ.ಜಿ. ಪರಮೇಶ್ವರ ಉಪಮುಖ್ಯಮಂತ್ರಿಯಾಗಿ ಹಾಗೂ 12 ಶಾಸಕರು ಸಚಿವರಾಗಿ ಅಧಿಕಾರ ವಹಿಸಿಕೊಂಡರು. ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ಕ್ಷೇತ್ರದ ಶಾಸಕರಾಗಿರುವ ಯು.ಟಿ.ಖಾದರ್ ದೇವರ ಹೆಸರಿನಲ್ಲಿ ಸಚಿವರಾಗಿ ಪ್ರಮಣವಚನ ಸ್ವೀಕರಿಸಿದರೆ.
ವಿಧಾನ ಸಭೆಯ ಸ್ಪೀಕರ್ ಆಗಿದ್ದ ಯು.ಟಿ. ಖಾದರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪುಟ ಸೇರಿದ ಹಿನ್ನೆಲೆಯಲ್ಲಿ ಮುಂದಿನ ಸ್ಪೀಕರ್ ಯಾರಾಗಹುದು ಎಂಬ ಕುತೂಹಲ ಸೃಷ್ಟಿಯಾಗಿದೆ.
ಈವರೆಗೆ 5 ಬಾರಿ ಶಾಸಕರಾಗಿ ಯು.ಟಿ.ಖಾದರ್ ಆಯ್ಕೆಯಾಗಿದ್ದಾರೆ. 2007ರಲ್ಲಿ ಮೊದಲ ಸಲ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ರು. 2013ರಲ್ಲಿ ಆರೋಗ್ಯ & ಕುಟುಂಬ ಕಲ್ಯಾಣ ಸಚಿವರಾಗಿದ್ದರು. 2016ರಲ್ಲಿ ಆಹಾರ, ನಾಗರಿಕ ಪೂರೈಕೆ ಖಾತೆ ನಿರ್ವಹಣೆ ಮಾಡಿದ್ರು. 2018ರಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಖಾತೆ ನಿಭಾಯಿಸಿದ್ದರು. ಚಾಮರಾಜನಗರ, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ್ರು. 2022ರಲ್ಲಿ ವಿಧಾನಸಭೆ ಪ್ರತಿಪಕ್ಷ ಉಪನಾಯಕರಾಗಿದ್ದರು. 2023ರಲ್ಲಿ ಸಿದ್ದರಾಮಯ್ಯ ಅವಧಿಯಲ್ಲಿ ವಿಧಾನಸಭೆ ಸ್ಪೀಕರ್ ಆಗಿ ಆಯ್ಕೆಯಾಗಿದ್ರು.
2022ರಿಂದ 2023ರವರೆಗೆ ಕರ್ನಾಟಕ ವಿಧಾನಸಭೆಯ ವಿಪಕ್ಷದ ಉಪನಾಯಕ, 2023ರಿಂದ ವಿಧಾನಸಭೆಯ ಸಭಾಧ್ಯಕ್ಷ. 2007ರಲ್ಲಿ ಉಳ್ಳಾಲ ವಿಧಾನಸಭಾ ಕ್ಷೇತ್ರದಿಂದ 12ನೇ ವಿಧಾನಸಭೆಗೆ, 2008-2013ರ ವರೆಗೆ 13ನೇ ವಿಧಾನಸಭೆ, 2013-2018ರ ವರೆಗೆ 14ನೇ ವಿಧಾನಸಭೆ, 2018-2023ರ ವರೆಗೆ 15ನೇ ವಿಧಾನಸಭೆ ಮತ್ತು 2023ರಲ್ಲಿ (ಕ್ಷೇತ್ರ ಪುನರ್‌ವಿಂಗಡಣೆ ವೇಳೆ ಉಳ್ಳಾಲ ಬದಲು ಮಂಗಳೂರು ಎಂದಾಗಿತ್ತು) ಮಂಗಳೂರು ವಿಧಾನಸಭಾ ಕ್ಷೇತ್ರದಿಂದ 16ನೇ ವಿಧಾನಸಭೆಗೆ ಆಯ್ಕೆ. ಕಾನೂನು ಪದವೀಧರರಾಗಿರುವ ಖಾದರ್ ವಿದ್ಯಾರ್ಥಿ ಜೀವನದಿಂದಲೇ ವಿವಿಧ ಸಂಘಟನೆಗಳಲ್ಲಿ ಸಕ್ರಿಯ. ಅವರ ತಂದೆ ಯು.ಟಿ.ಫರೀದ್ 1972, 1978, 1999 ಮತ್ತು 2004ರಲ್ಲಿ ಶಾಸಕರಾಗಿದ್ದರು.
ಸಚಿವರಾಗುವವರ ಪಟ್ಟಿಯಲ್ಲಿ ನನ್ನ ಹೆಸರು ಇದ್ದರೆ ರಾಜೀನಾಮೆ ಅಂಗೀಕರಿಸಿ, ಬರದಿದ್ದರೆ ವಾಪಸ್ ನೀಡಿ ಎಂದು ತಿಳಿಸಿದ್ದೇನೆ ಎಂದಿದ್ದರು. ಅದರಂತೆ, ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವುದು ಖಚಿತವಾದ ನಂತರ ರಾಜೀನಾಮೆ ಅಂಗೀಕಾರವಾಗಿದೆ. ತೆರವಾದ ಸ್ಥಾನಕ್ಕೆ ಜೂ.3ರ ಮಧ್ಯಾಹ್ನದಿಂದ ರುದ್ರಪ್ಪ ಮಾನಪ್ಪ ಲಮಾಣಿ ಅವರು ಸ್ಪೀಕರ್ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ ಎಂದು ವಿಧಾನಸಭೆ ಸಚಿವಾಲಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಆದೇಶಿಸಿದ್ದಾರೆ.
ಯಾವುದೇ ಖಾತೆಯನ್ನು ಕೊಟ್ಟರೂ ನಾನು ನಿಭಾಯಿಸುತ್ತೇನೆ. ಖಾತೆ ಯಾವುದು ಅನ್ನೋದು ಮುಖ್ಯವಲ್ಲ, ಕೆಲಸ ಮುಖ್ಯ ಆಗುತ್ತೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
























