ಸಿಂಧನೂರು: ಸಂವಿಧಾನ ಉಳಿದರೆ ನಾವೆಲ್ಲಾ ಉಳಿಯುತ್ತೇವೆ. ಹೀಗಾಗಿ ದೇಶದ ರಕ್ಷಣೆ ಪ್ರತಿಯೊಬ್ಬರ ಘೋಷಣೆ ಆಗಬೇಕು. ಪಾಕಿಸ್ತಾನ ಪರ ಯಾರೇ ಆಗಲಿ ಘೋಷಣೆ ಹಾಕಿದರೆ, ಅವರನ್ನು ನೇಣಿಗೆ ಹಾಕಲ್ಲ, ನಾವೇ ಗುಂಡಿಟ್ಟು ಕೊಲ್ತೇವೆ… ಹೀಗೆಂದು ಸಚಿವ ಜಮೀರ್ ಅಹ್ಮದ್ ಗುಡುಗಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಾವು ಹಿಂದೂ ಮುಸ್ಲಿಂ ಅಲ್ಲ. ನಾವೆಲ್ಲಾ ಹಿಂದೂಸ್ಥಾನಿಗಳು. ಬಿಜೆಪಿಯು ಹಿಂದೂಗಳು – ಮುಸ್ಲಿಮರನ್ನು ಒಡೆಯುತ್ತಿದೆ. ಕ್ಯಾನ್ಸರ್ ಒಂದು ಎರಡನೇ ಹಂತದಲ್ಲಿದ್ದರೆ ಬದುಕುತ್ತಾರೆ. ಆದ್ರೆ ಮೂರನೇ ಹಂತಕ್ಕೆ ಬಂದರೆ ಮನುಷ್ಯರನ್ನು ಸಾಯಿಸುತ್ತದೆ. ಹಾಗೆಯೇ, ಎರಡು ಬಾರಿ ಅಧಿಕಾರ ಅನುಭವಿಸಿದ ಬಿಜೆಪಿಯವರು, ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ನಮ್ಮೆಲ್ಲರನ್ನು ಸಾಯಿಸುತ್ತಾರೆ’’ ಎಂದರು.
“ಮುಂದಿನ ಜುಲೈ ತಿಂಗಳಲ್ಲಿ 4800 ಮನೆಗಳನ್ನು ಕೊಡುತ್ತೇವೆ. ಚುನಾವಣೆ ಪೂರ್ವದಲ್ಲಿ ಮನೆಗಳನ್ನು ಕೊಡುತ್ತೆವೆಂದು ಭರವಸೆ ಕೊಟ್ಟಿದ್ದಿಲ್ಲ ಆದರೂ ಬಡವರು ಬಿಸಿಲು ಮಳೆ ಚಳಿಯಿಂದ ಬದುಕು ಸಾಗಿಸಬಾರದು ಎಂಬ ಕಾರಣಕ್ಕಾಗಿ ಮನೆಗಳನ್ನು ಕೊಟ್ಟಿದ್ದೇವೆ’’ ಎಂದರು.