ಪಾಕಶಾಸ್ತ್ರ ಕ್ಷೇತ್ರದ ನಳಪಾಕ ಎಂದೇ ಚಿರಪರಿಚಿತರಾಗಿರುವ ಸ್ವಚ್ಛ ಅಡುಗೆ ಅಭಿಯಾನದ ಮೂಲಕ ಜಿಲ್ಲೆಯಾದ್ಯಂತ ತನ್ನ ಚಾಪನ್ನು ಮೂಡಿಸಿರುವ ವೆಂಕಟೇಶ್ ಭಟ್ ಪಾವಂಜೆಯವರಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು,ಮಂಗಳೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಗಣ್ಯರಿಂದ ಗೌರವಿಸಿ ಅಭಿನಂದಿಸಲಾಯಿತು.
ಕಳೆದ ಹಲವು ವರ್ಷಗಳಿಂದ ಸಸ್ಯಾಹಾರಿ ಅಡುಗೆಯಲ್ಲಿ ವಿಶಿಷ್ಟ ಸೇವೆಯನ್ನು ನೀಡಿರುವ ಪಾವಂಜೆಯವರು, ಕಟೀಲು, ಬಪ್ಪನಾಡು, ತೋಕೂರು, ಸಸಿಹಿತ್ಲು ಸಹಿತ ಹಲವು ದೇವಸ್ಥಾನಗಳ ಜೀರ್ಣೋದ್ದಾರ, ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತರಿಗೆ ಅನ್ನಪ್ರಸಾದ ತಯಾರಿಸಿ ಯಶಸ್ವಿ ಸೇವೆ ಸಲ್ಲಿಸಿದ್ದಾರೆ.
ಪಾಕಶಾಸ್ತ್ರದ ಜೊತೆ ಜೊತೆಗೆ ಜಾನಪದ ಕ್ರೀಡಾ ಕ್ಷೇತ್ರದಲ್ಲೂ ಹೆಚ್ಚಿನ ಆಸಕ್ತಿ ಹೊಂದಿರುವ ಇವರು ನವರಾತ್ರಿ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನಡೆಯುವ ಅನೇಕ ಹುಲಿ ವೇಷ ಸ್ಪರ್ಧೆಯ ತೀರ್ಪುಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ತಾನೇ ಹುಲಿ ವೇಷ ಧರಿಸಿ ತುಳುನಾಡಿನ ಜಾನಪದ ಕಲೆಯ ಉಳಿವಿಗಾಗಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಕ್ರೀಡಾಕ್ಷೇತ್ರದಲ್ಲಿ ಕುಸ್ತಿ ಮತ್ತು ದೇಹದಾರ್ಡ್ಯ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಪಾವಂಜೆಯವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಇಡೀ ಊರಿಗೆ ಹೆಮ್ಮೆಯಾಗಿದ್ದು, ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.


























