ಪುತ್ತೂರು: ಭಕ್ತಕೋಡಿ-ರೆಂಜಲಾಡಿ ರಸ್ತೆ ಅಭಿವೃದ್ಧಿಗೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿಯವರು 24 ಲಕ್ಷ ರೂ ಅನುದಾನ ಒದಗಿಸಿದ್ದು ಅದರ ಗುದ್ದಲಿ ಪೂಜೆ ಜೂ.28ರಂದು ಭಕ್ತಕೋಡಿಯಲ್ಲಿ ನಡೆಯಿತು.
ಗುದ್ದಲಿಪೂಜೆ ನೆರವೇರಿಸಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ ಇದು ನನ್ನ ಊರು, ನನ್ನ ಊರು ನನಗೆ ಯಾವತ್ತೂ ಹೆಮ್ಮೆ, ಊರಿನಲ್ಲಿ ಒಗ್ಗಟ್ಟು ಮತ್ತು ಅಭಿವೃದ್ಧಿ ಮುಖ್ಯ ಎನ್ನುವ ಕಾರಣಕ್ಕೆ ಇಲ್ಲಿಗೆ ಬರುವಾಗ ರಾಜಕೀಯವನ್ನು ಮರೆತು ಬಂದಿದ್ದೇನೆ, ನಿಮ್ಮೆಲ್ಲರ ಆಶೀರ್ವಾದದಿಂದಾಗಿ ನನ್ನೂರಿಗೆ ಏನಾದರೊಂದು ಕೊಡುಗೆ ನೀಡಲು ಸಾಧ್ಯವಾಗಿದ್ದಕ್ಕೆ ನನಗೆ ಖುಷಿ ಇದೆ ಎಂದು ಹೇಳಿದರು. ವಿಧಾನ ಪರಿಷತ್ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಈ ರಸ್ತೆ ಅಭಿವೃದ್ಧಿಗೆ ರೂ.24 ಲಕ್ಷ ಅನುದಾನ ಒದಗಿಸಿದ್ದು ಸಂಪೂರ್ಣ ಹದಗೆಟ್ಟಿರುವ ಈ ರಸ್ತೆಗೆ ಈ ಅನುದಾನ ಸಾಕಾಗುವುದಿಲ್ಲ ಎಂದು ತಿಳಿದಿದೆ, 10 ಲಕ್ಷ ಹೆಚ್ಚುವರಿ ಮೊತ್ತವನ್ನು ಏನಾದ್ರೂ ಮಾಡಿ ಒದಗಿಸುತ್ತೇನೆ ಹಾಗಾಗಿ ಹೆಚ್ಚುವರಿ 10 ಲಕ್ಷದ ಅನುದಾದ ಸೇರಿಸಿಕೊಂಡು ಕಾಮಗಾರಿ ಮಾಡಬೇಕು ಎಂದು ಸ್ಥಳದಲ್ಲಿದ್ದ ಗುತ್ತಿಗೆದಾರರಲ್ಲಿ ಅವರು ಹೇಳಿದರು.
ಗ್ರಾಮ ವಿಕಾಸ ಆದರೆ ರಾಷ್ಟ್ರ ವಿಕಾಸ ಆಗುತ್ತದೆ, ಹಾಗಾಗಿ ಪ್ರತೀ ಗ್ರಾಮ ಅಭಿವೃದ್ಧಿ ಹೊಂದಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದ್ದು ಅದನ್ನು ನನಸು ಮಾಡುವ ಕೆಲಸವನ್ನು ನಾವು ಮಾಡಬೇಕಾಗಿದೆ, ಗ್ರಾಮದ ಅಭಿವೃದ್ಧಿಗೆ ಒತ್ತು ಕೊಡುವುದರ ಜೊತೆಗೆ ನನ್ನೂರಿನ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇನೆ, ಮುಂದಕ್ಕೆ ರಾಜ್ಯದಲ್ಲಿ ನಮ್ಮ ಸರಕಾರ ಬರಬೇಕಾಗಿದೆ ಎಂದು ಅವರು ಹೇಳಿದರು. ನಿಮ್ಮೆಲ್ಲರ ಪರಿಶ್ರಮದ ಫಲವಾಗಿ ನಾನಿಂದು ವಿಧಾನ ಪರಿಷತ್ ಸದಸ್ಯನಾಗಿದ್ದು ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ, ನಾವೆಲ್ಲಾ ಒಗ್ಗಟ್ಟಿನಿಂದ ಇದ್ದರೆ ಯಾವುದೇ ಕೆಲಸವನ್ನು ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ ಎಂದ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ನೀಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಸರ್ವೆ ಕಲ್ಪಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣ ನಿರ್ಮಾಣಕ್ಕೆ ಅನುದಾನ ನೀಡುವಂತೆ ಈ ಹಿಂದೆ ಶಾಲೆಯ ವತಿಯಿಂದ ಎಂಎಲ್ಸಿ ಕಿಶೋರ್ ಬೊಟ್ಯಾಡಿಯವರಿಗೆ ಮನವಿ ನೀಡಲಾಗಿದ್ದು ಈ ಬಗ್ಗೆ ಶಾಲಾ ಮುಖ್ಯ ಶಿಕ್ಷಕಿ ಕಮಲಾ, ಶಿಕ್ಷಕಿ ಉಮಾವತಿ ಹಾಗೂ ಶಿಕ್ಷಕ ಸತೀಶ್ ಮೊದಲಾದವರು ಕಿಶೋರ್ ಬೊಟ್ಯಾಡಿಯವರಲ್ಲಿ ಮಾತನಾಡಿದ ವೇಳೆ ಪ್ರತಿಕ್ರಿಯಿಸಿದ ಕಿಶೋರ್ ಬೊಟ್ಯಾಡಿಯವರು ಸರ್ವೆ ಕಲ್ಪಣೆ ಸ.ಹಿ.ಪ್ರಾ.ಶಾಲೆಯ ಸಭಾಭವನ ನಿರ್ಮಾಣಕ್ಕೆ 25 ಲಕ್ಷ ರೂ ಅನುದಾನ ನೀಡುತ್ತೇನೆ ಎಂದು ಹೇಳಿದರು.
ಸ್ವಾಗತಿಸಿದ 193 ಬೂತ್ ಅಧ್ಯಕ್ಷ ರಾಧಾಕೃಷ್ಣ ರೈ ರೆಂಜಲಾಡಿ ಮಾತನಾಡಿ ಭಕ್ತಕೋಡಿ-ರೆಂಜಲಾಡಿ ರಸ್ತೆ ಹದಗೆಟ್ಟು ಅನೇಕ ವರ್ಷಗಳೇ ಕಳೆದಿದ್ದು ಇದನ್ನು ಯಾರು ಕೂಡಾ ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ, ನಮ್ಮ ಪ್ರಮುಖ ಬೇಡಿಕೆಯಾಗಿದ್ದ ಈ ರಸ್ತೆಯ ಅಭಿವೃದ್ಧಿಗೆ ಎಂಎಲ್ಸಿ ಕಿಶೋರ್ ಬೊಟ್ಯಾಡಿ ಅವರಲ್ಲಿ ಕೇಳಿಕೊಂಡಾಗ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು, ಇದೀಗ 24 ಲಕ್ಷ ರೂ ಅನುದಾನ ಒದಗಿಸಿದ್ದು ನಮಗೆಲ್ಲಾ ಅತೀವ ಸಂತಸ ತಂದಿದೆ ಎಂದು ಹೇಳಿದರು. ನಮ್ಮೂರಿನ ಹುಡುಗ ಕಿಶೋರ್ ಬೊಟ್ಯಾಡಿ ಇಷ್ಟು ಎತ್ತರಕ್ಕೆ ಬೆಳೆದಿರುವುದು ನಮಗೆಲ್ಲಾ ಹೆಮ್ಮೆಯ ವಿಚಾರ ಎಂದ ಅವರು ನಮ್ಮೂರಿನಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ತುಂಬಾ ತೊಂದರೆಯಾಗುತ್ತಿದೆ, ಈ ಬಗ್ಗೆ ಸಂಸದರ ಜೊತೆ ನೀವು ಮಾತನಾಡಿ ಬಗೆಹರಿಸಬೇಕು, ನೀವು ಮನಸ್ಸು ಮಾಡಿದರೆ ನಿಮಗೆ ಐದು ನಿಮಿಷದ ಕೆಲಸ ಎಂದು ಅವರು ಹೇಳಿದರು.
ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪ್ರ.ಕಾರ್ಯದರ್ಶಿ ಸುನಿಲ್ ದಡ್ಡು, ಉಪಾಧ್ಯಕ್ಷರಾದ ವಿರೂಪಾಕ್ಷ ಭಟ್, ವಿದ್ಯಾಧರ ಜೈನ್, ಯತೀಂದ್ರ ಕೊಚ್ಚಿ, ಒಬಿಸಿ ಮೋರ್ಚಾ ಪ್ರ.ಕಾರ್ಯದರ್ಶಿ ಮಹಾಬಲ, ರೈತ ಮೋರ್ಚಾದ ಅಧ್ಯಕ್ಷ ಶರತ್‌ಚಂದ್ರ ಬೈಪಾಡಿತಾಯ,ಮಹಿಳಾ ಮೋರ್ಚಾ ಅಧ್ಯಕ್ಷೆ ಯಶೋಧ, ನರಿಮೊಗರು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಪ್ರವೀಣ್ ಸೇರಾಜೆ, ಸರ್ವೆ ಶಕ್ತಿ ಕೇಂದದ್ರ ಅಧ್ಯಕ್ಷ ಗೌತಮ್ ರೈ ಸರ್ವೆ, ಮುಂಡೂರು ಗ್ರಾ.ಪಂ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ, 192 ಬೂತ್ ಅಧ್ಯಕ್ಷ ಜಯಂತ್ ಬಿ, ಕಾರ್ಯದರ್ಶಿ ಶಿವಪ್ರಸಾದ್, 193 ಬೂತ್ ಕಾರ್ಯದರ್ಶಿ ಹೇಮರಾಜ್ ಆಚಾರ್ಯ, 194 ಬೂತ್ ಕಾರ್ಯದರ್ಶಿ ಸುರೇಶ್, ಸದಾಶಿವ ಭಂಡಾರಿ ಬೊಟ್ಯಾಡಿ, ಅಶೋಕ್ ರೈ ಸೊರಕೆ, ಸುಂದರ ಬಲ್ಯಾಯ, ಬೆಳಿಯಪ್ಪ ಗೌಡ ಸರ್ವೆ, ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ, ಡಾ.ಸೀತರಾಮ ಭಟ್ ಕಲ್ಲಮ, ಶ್ರೀನಿವಾಸ್ ಎಚ್.ಬಿ, ಜಿ.ಕೆ ಪ್ರಸನ್ನ ಭಟ್, ಸುರೇಶ್ ಎಸ್.ಡಿ, ಪುರಂದರ ರೈ ರೆಂಜಲಾಡಿ, ವಾಸು ಬಿ.ಎಂ, ಸುಶಾಂತ್ ಬಿ, ವಿಶ್ವನಾಥ್ ರೈ ಮಡಂಗಿಲ, ನವೀನ್ ರೈ ಸರ್ವೆ, ಕೀರ್ತಿಶ್ ಸರ್ವೆ, ಸ್ವಸ್ತಿಕ್ ಮೇಗಿನಗುತು, ಬಾಲಕೃಷ್ಣ, ಚೇತನ್ ರೈ, ವಿನಯ ಕುಮಾರ್ ರೈ, ರೋಹಿತ್ ಬಿ, ಚೋಮ ಬಿ, ಪುರುಷೋತ್ತಮ ಗೌಡ, ಯತೀಶ್ ಕಡ್ಯ, ತಿಲಕ್‌ರಾಜ್ ಕರುಬಾರು, ಸತೀಶ್ ಕಡ್ಯ, ತಿಲಕ್ ಕಡ್ಯ, ರಾಮಣ್ಣ ಶೆಟ್ಟಿ, ಪದ್ಮನಾಭ ಗೌಡ ಸರ್ವೆ, ಲೋಕೇಶ್ ಗೌಡ, ಜಯಪ್ರಕಾಶ್ ಬಾಲಯ, ಜಗದೀಶ್ ಬಾಲಯ, ಜೀವನ್ ಕಡ್ಯ, ದಾಮೋದರ ಮರಿಯ, ಸಂತೋಷ್ ಕಲ್ಪಣೆ, ನವೀನ್ ರೈ ರೆಂಜಲಾಡಿ, ಮಹಾಲಿಂಗ ಭಂಡಾರಿ, ನಾಗರಾಜ್ ರೈ, ಜಯರಾಮ್ ರೈ, ಪ್ರಸಾದ್ ರೈ, ಅವಿನಾಶ್, ಚೇತನ್ ಕಲ್ಪನೆ, ಸಿದ್ದಾರ್ಥ್, ಸುರೇಶ್ ರೆಂಜಲಾಡಿ ಉಪಸ್ಥಿತರಿದ್ದರು.
























