ಮಂಗಳೂರು: ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹೊಡೆಯಿರಿ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಸೂಚನೆ ನೀಡಿದ್ದಾರೆ. ಹಿಂದಿನ ಆಯುಕ್ತ ಸಂದೀಪ್ ಪಾಟೀಲ್ ಸುಮಾರು ಗುಂಡು ಹೊಡೆದಿದ್ದರು. ಹೀಗಾಗಿ ಆಗ ಕ್ರಿಮಿನಲ್ಸ್, ರೌಡಿಶೀಟರ್ಗಳು ಕ್ರೈಂ ಮಾಡಲು ಹೆದರುತ್ತಿದ್ದರು. ಹಾಗೆ ಮಾಡಲು ಕಾನೂನು ಅಡ್ಡಿ ಬರುತ್ತೆ, ಆದ್ರೆ ಕ್ರೈಂ ಕಂಟ್ರೋಲ್ ಆಗುತ್ತೆ ಎಂದು ಮಂಗಳೂರಿನಲ್ಲಿ ನಿನ್ನೆ ನಡೆದ ಸಭೆಯಲ್ಲಿ ಸಚಿವ ಖಾದರ್ ಸೂಚಿಸಿದ್ದರು.
ಜಿಲ್ಲೆಯ ವಿಪತ್ತು ನಿರ್ವಹಣಾ ಸಭೆಯಲ್ಲಿ ಆರೋಗ್ಯ ಸಚಿವ ಯು ಟಿ ಖಾದರ್ ಅವರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರಲ್ಲಿ, ಮಂಗಳೂರಿನಲ್ಲಿ ನಡೆದಿರುವ ಕೊಲೆ, ಸುಲಿಗೆ, ಗಡೀಪಾರು ಮುಂತಾದವುಗಳ ಲೆಕ್ಕ (ಅಂಕಿ ಅಂಶ) ಕೇಳುವ, ಕ್ರಿಮಿನಲ್ ಗಳ ಕಾಲಿಗೆ ಗುಂಡು ಹಾರಿಸುವಂತೆ ಸಲಹೆ ನೀಡುವ, ಕಾನೂನು ಸುವ್ಯವಸ್ಥೆ ಕುರಿತಾಗಿ ಮಾರ್ಗದರ್ಶನ ಮಾಡುವ ವೀಡಿಯೋ ವೈರಲ್ ಆಗಿದೆ, ಚರ್ಚೆಗೆ ಗ್ರಾಸ ಆಗಿದೆ. ಸಚಿವರ ಈ ಹೇಳಿಕೆಯೀಗ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.























