ಪುತ್ತೂರು: ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿರುವ ಮನೀಷ್‌ಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.2023ರ ನವೆಂಬರ್ 6ರಂದು ಪುತ್ತೂರಿನ ನೆಹರುನಗರದಲ್ಲಿ ರಾತ್ರಿ ವೇಳೆ ಅಕ್ಷಯ್ ಕಲ್ಲೇಗ ಅವರನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪಡೀಲು ನಿವಾಸಿ ಮನೀಷ್, ಕೃಷ್ಣನಗರದ ಚೇತನ್, ಬನ್ನೂರಿನ ಮಂಜುನಾಥ್ ಅಲಿಯಾಸ್ ಹರಿ ಹಾಗೂ ಕೇಶವ ಪಡೀಲ್ ಅವರನ್ನು ಪೊಲೀಸರು ಬಂಧಿಸಿದ್ದರು.ಪ್ರಕರಣದಲ್ಲಿ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಹಿಂದೆ ತಿರಸ್ಕರಿಸಿತ್ತು. ಬಳಿಕ ಹೈಕೋರ್ಟ್ ಕೂಡ ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.
ಆದರೆ ನಂತರದ ಬೆಳವಣಿಗೆಯಲ್ಲಿ ಪ್ರಕರಣದ 3ನೇ ಆರೋಪಿ ಮಂಜುನಾಥ್ ಶೆಣೈ ಹಾಗೂ 4ನೇ ಆರೋಪಿ ಕೇಶವ ಅವರಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.ಇದಾದ ಬಳಿಕ 1ನೇ ಆರೋಪಿ ಮನೀಷ್ ಹಾಗೂ 2ನೇ ಆರೋಪಿ ಚೇತನ್ ಮತ್ತೆ ಜಾಮೀನು ಕೋರಿ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು. ಇದೀಗ 1ನೇ ಆರೋಪಿ ಮನೀಷ್‌ಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಹೈಕೋರ್ಟ್ ನ್ಯಾಯದೀಶರಾದ ಜಸ್ಟೀಸ್ ವಿಶ್ವಜಿತ್ ಶೆಟ್ಟಿ ಜಾಮೀನು ಮಂಜೂರು ಮಾಡಿದ್ದಾರೆ.























