ಪುತ್ತೂರು: ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅನುದಾನದಲ್ಲಿ ಆಂಜನೇಯ ದೇವಸ್ಥಾನದ ಬಳಿ ಸರ್ಕಲ್ ಹಾಗೂ ಬಸ್ ಬೇ ಅಭಿವೃದ್ಧಿಗೆ ರೂ. 25 ಲಕ್ಷ ಹಾಗೂ ಬೊಳುವಾರು ಜಂಕ್ಷನ್ ಬಳಿ 24 ಲಕ್ಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಪ್ರಯಾಣಿಕರ ತಂಗುದಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ನಡೆಯಿತು.
ಶಿಲಾನ್ಯಾಸ ನೆರವೇರಿಸಿದ ಶಾಸಕ ಅಶೋಕ್ ರೈ ಮಾತನಾಡಿ, ಪುತ್ತೂರು-ಉಪ್ಪಿನಂಗಡಿ ರಸ್ತೆ ಅಭಿವೃದ್ಧಿ ಹೊಂದುತ್ತಿದ್ದು, ಬೊಳುವಾರು ಜಂಕ್ಷನ್ನಲ್ಲಿ ಅಗಲಗೊಳಿಸಲು ಪೂರಕ ಜಾಗ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ನಾವು ತಡೆಗಳನ್ನು ನಿವಾರಿಸಿ 50 ವರ್ಷಗಳ ಯೋಜನೆ ಹಾಕಿಕೊಂಡು ಚತುಷ್ಪಥವಾಗಿ ವಿಸ್ತಾರ ಮಾಡಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಮಾಡುವ ಕೆಲಸ ಪರಿಪೂರ್ಣ ಹಾಗೂ ಗುಣಮಟ್ಟದಿಂದಿರಬೇಕು ಎಂದು ಮಾಸ್ಟರ್ ಪ್ಲಾನ್ ಅವರಿಗೆ ಕೆಲಸ ಕೊಟ್ಟಿದ್ದೇವೆ. ಬೊಳುವಾರು ಪರಿಸರದ ಸೌಂದರ್ಯದ ವಿಚಾರದಲ್ಲೂ ಯಾವುದೇ ರಾಜಿ ಇಲ್ಲ ಎಂದು ಹೇಳಿದರು.
ಪುತ್ತೂರು-ಉಪ್ಪಿನಂಗಡಿ ರಸ್ತೆಯ ಉಳಿಕೆ ಭಾಗಗಳು ರೂ. 22.50 ಕೋಟಿಯಲ್ಲಿ ಅಭಿವೃದ್ಧಿಗೊಳ್ಳುತ್ತಿದೆ. ಹಾರಾಡಿ ರೈಲ್ವೆ ಬ್ರಿಡ್ಜ್ಗೆ 8 ಕೋಟಿ, ನೆಕ್ಕಿಲಾಡಿಯಿಂದ ಉಪ್ಪಿನಂಗಡಿ ರಸ್ತೆ ಅಭಿವೃದ್ಧಿಯು 13.50 ಕೋಟಿ ಅನುದಾನ ನೀಡಲಾಗಿದೆ. 2.50 ಕೋಟಿ ಕೋಡಿಂಬಾಡಿ ಭಾಗದಲ್ಲಿ ಅಭಿವೃದ್ಧಿಗೆ, ರೂ. 5.50 ಕೋಟಿ ವಿದ್ಯುತ್ ದೀಪ ಅಳವಡಿಸುವ ವ್ಯವಸ್ಥೆಗೆ ವಿನಿಯೋಗಿಸಲಾಗುತ್ತಿದೆ ಎಂದು ಅಶೋಕ್ ರೈ ಹೇಳಿದರು.
ಮಂಗಳೂರು ಕಾರ್ಯಕ್ರಮದ ಬಳಿಕ ಸ್ವತ: ಮುಖ್ಯಮಂತ್ರಿಗಳೇ ಕರೆಮಾಡಿ ತುಳುವಿನವರ ಭಾವನೆ ಇಷ್ಟು ಇದೆಯಾ ಎಂದು ಆಶ್ಚರ್ಯಭರಿತರಾಗಿ ಕೇಳಿದ್ದಾರೆ. ಈ ಸರಕಾರ ಮಠಗಳಿಗೆ ಅನುದಾನ ಬಿಡುಗಡೆ ಮಾಡಿದೆ. ಇದು ನಮ್ಮದೇ ಕೂಸು. ಆದರೆ ಸ್ವಾಮೀಜಿಯವರನ್ನು ಕರೆಸಿ ಭಾಷಣ ಮಾಡಿಸಿದವರು ಏನು ಕೊಟ್ಟಿಲ್ಲ. ಸ್ವಾಮೀಜಿಗಳು ಯಾವುದೇ ಅಪೇಕ್ಷೆ ಇಲ್ಲದೆ ಸಮಾಜಕ್ಕೆ ಕೊಡುಗೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಸಮುದಾಯದ ಶ್ರದ್ಧಾಕೇಂದ್ರಗಳಿಗೆ ಕಾಂಗ್ರೆಸ್ ಸರಕಾರ ಅನುದಾನ ಬಿಡುಗಡೆ ಮಾಡಿದೆ ಎಂದರು.
ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗೆ 550 ಕೋಟಿ ಕ್ಯಾಬಿನೆಟ್ ಸಭೆಯಲ್ಲಿ ಮಂಜೂರು ಆಗಿದೆ. 180 ಕೋಟಿ ಸರಕಾರಿ ಆಸ್ಪತ್ರೆಗೆ ಬಿಡುಗಡೆಗೊಂಡು ಕೆಲಸ ಆಗುತ್ತಿದೆ. ದ.ಕ. ಜಿಲ್ಲೆಗೆ ತಿಂಗಳಲ್ಲಿ ಮಂಗಳೂರು ಹೆಸರು ಅಂತಿಮಗೊಳ್ಳಲಿದೆ. ಅಭಿವೃದ್ಧಿಯಲ್ಲಿ ನಾವು ಜಯಶಾಲಿ ಆಗುತ್ತೇವೆ. ಪುತ್ತೂರು ನ್ಯೂ ಬಿಲ್ಟ್ ಸಿಟಿ ಆಗುತ್ತದೆ ಎಂದು ಅಶೋಕ್ ರೈ ಹೇಳಿದರು. ಮಂಗಳೂರು ಅಭಿವೃದ್ಧಿಯ ದೃಷ್ಟಿಯಿಂದ ಅಂಗಡಿ ಮುಂಗಟ್ಟುಗಳು ರಾತ್ರಿ 1 ಗಂಟೆ ತನಕ ಓಪನ್ ಇಡುವಂತೆ ಸಿಎಂ ಅವರು ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದಾರೆ. ಜನ ಅಶೀರ್ವಾದ ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ. ಸಂಯೋಜಕ ಕಾವು ಹೇಮನಾಥ ಶೆಟ್ಟಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ ಪುಡಾ ಅಧ್ಯಕ್ಷ ಅಮಳ ರಾಮಚಂದ್ರ,ಪುಡಾ ಸದಸ್ಯರಾದ ನಿಹಾಲ್ ಶೆಟ್ಟಿ, ಲ್ಯಾನ್ಸಿ ಮಾಸ್ಕರೇನಸ್, ಅನ್ವರ್ ಖಾಸಿಂ,ಪುಡಾ ಸದಸ್ಯ ಕಾರ್ಯದರ್ಶಿ ಗುರು ಪ್ರಸಾದ್, ಪೌರಾಯುಕ್ತೆ ವಿದ್ಯಾ ಕಾಳೆ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಯು.ಟಿ. ತೌಸೀಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


























