ರಾಮಕುಂಜ: ಇಲ್ಲಿನ ಕಾಜರುಕ್ಕು ದಿ| ವಿಶ್ವನಾಥ ಪೂಜಾರಿಯವರ ಪುತ್ರ, ಕೆಸಿಡಿಸಿಯಲ್ಲಿ ಗುತ್ತಿಗೆ ಆಧಾರದಲ್ಲಿ ಅರಣ್ಯ ವೀಕ್ಷಕನಾಗಿ ಕೆಲಸ ಮಾಡುತ್ತಿದ್ದ ಸಚಿನ್ (33ವ.) ಅವರು ಸೆ.22ರಂದು ಮಧ್ಯಾಹ್ನ 3 ಗಂಟೆ ವೇಳೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇದಕ್ಕೂ ಮೊದಲು ಕಾಜರುಕ್ಕು ಎಂಬಲ್ಲಿ ಬೈಕ್ ಸರ್ವಿಸ್ ಸ್ಟೇಷನ್ ನಡೆಸುತ್ತಿದ್ದರು.
ಸೆ.22ರಂದು ಮಧ್ಯಾಹ್ನ ಸುಮಾರು 1.30ಕ್ಕೆ ಮನೆಗೆ ಬಂದ ಸಚಿನ್ ಊಟ ಮಾಡಿ ಮಲಗಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಅವರ ತಾಯಿ ಎಬ್ಬಿಸಲು ತೆರಳಿದಾಗ ಸಚಿನ್ ಜೋರಾಗಿ ಉಸಿರಾಡುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ಮತ್ತೊಬ್ಬ ಪುತ್ರ ಚರಣ್ ಅವರಿಗೆ ಮಾಹಿತಿ ನೀಡಿದ್ದರು. ಚರಣ್ ಅವರು ಮನೆಗೆ ಬಂದು ಸಚಿನ್ ಅವರಿಗೆ ಉಸಿರಾಟಕ್ಕೆ ತೊಂದರೆಯಾಗುತ್ತಿರುವುದನ್ನು ಗಮನಿಸಿ, ಪರಿಚಯದ ಪ್ರಶಾಂತ್ ಅವರ ಕಾರಿನಲ್ಲಿ ಚಿಕಿತ್ಸೆಗೆ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ, ಮಧ್ಯಾಹ್ನ 3.10ರ ಸುಮಾರಿಗೆ ಪರೀಕ್ಷಿಸಿದ ವೈದ್ಯಾಧಿಕಾರಿಗಳು ಸಚಿನ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಬಳಿಕ ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸಚಿನ್ ಅವರು ಹೃದಯಾಘಾತ ಅಥವಾ ಯಾವುದಾದರೂ ಅನಾರೋಗ್ಯದಿಂದ ಮೃತಪಟ್ಟಿರಬಹುದು. ಅವರ ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ಮೃತರ ಸಹೋದರ ಚರಣ್ ನೀಡಿದ ದೂರಿನ ಆಧಾರದಲ್ಲಿ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
























