ಪುತ್ತೂರು: ಶ್ರೀ ಶಾರದಾ ಭಜನಾ ಮಂದಿರದ ಆಶ್ರಯದಲ್ಲಿ ನವರಾತ್ರಿ ಉತ್ಸವ ಹಾಗೂ ಪುತ್ತೂರು ದಸರಾ! ಈ ಬಾರಿಯ ಶಾರದೋತ್ಸವದ ಶಾರದಾ ಭಜನಾ ಮಂದಿರದ ವರ್ಷಂಪ್ರತಿ ಆಚರಿಸಲ್ಪಡುವ ನವರಾತ್ರಿ, ಪೂಜೆ ಹಾಗೂ ಶ್ರೀ ಶಾರದೋತ್ಸವ, ಚಂಡಿಕಾಹೋಮ ಮತ್ತು ವಿಜೃಂಭಣೆಯ ಭವ್ಯ ಶೋಭಾಯಾತ್ರೆಯು ಒಕ್ಟೋಬರ್ 11 ಭಾನುವಾರದಿಂದ 21ನೇ ಬುಧವಾರದವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಶೋಭಾಯಾತ್ರೆ ಸಾಗುವ ಹಾದಿಯಲ್ಲಿ ವಿದ್ಯುತ್ ದೀಪಾಲಂಕಾರದ ಜೊತೆಗೆ ಕೇರಳ ಮತ್ತು ಕರ್ನಾಟಕದಿಂದ ಹಲವಾರು ಕಲಾ ತಂಡಗಳು ಭಾಗಿಯಾಗುವುದು ವಿಶೇಷ ಆಕರ್ಷಣೆಯಾಗಿದೆ.
ಸುಮಾರು 500 ರಿಂದ 600 ತಂಡಗಳಿಂದ ಕುಣಿತ ಭಜನೆ ಮೆರವಣಿಗೆಯಲ್ಲಿ ಇದ್ದು ಸನಾತನ ಸಂಸ್ಕೃತಿಯ ಮಹತ್ವವನ್ನು ಶೋಭಾಯಾತ್ರೆಯಲ್ಲಿ ಸಾರಲಾಗುತ್ತದೆ. ಪುತ್ತೂರಿನ ಮಹಾಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸುವಂತೆ ಪತ್ರಿಕಾಗೋಷ್ಠಿಯಲ್ಲಿ ಶಾರದಾ ಭಜನಾ ಮಂದಿರದ ಅಧ್ಯಕ್ಷ ಸೀತರಾಮ ರೈ ಕೆದಂಬಾಡಿಗುತ್ತು ಹೇಳಿದರು.
ಮುಖ್ಯವಾಗಿ ಇಲ್ಲಿಯವರೆಗೆ ಪುತ್ತೂರು ಶಾರದೋತ್ಸವ ಎಂಬ ಹೆಸರಿದ್ದು ಇನ್ನು ಮುಂದೆ ಪುತ್ತೂರು ದಸರಾ ಎಂಬ ನಾಮಾಂಕಿತದಿಂದ ನಡೆಯಲಿದೆ ಎಂದು ಗೋಷ್ಠಿಯಲ್ಲಿ ತಿಳಿಸಲಾಗಿದೆ. ಹಿಂದೆ ಪುತ್ತೂರಿನ ಜನರು ದಸರಾ ಮೆರವಣಿಗೆಯ ವೈಭವವನ್ನು ಕಣ್ತುಂಬಿಕೊಳ್ಳಲು ಮಂಗಳೂರು ಹಾಗೂ ಮಡಿಕೇರಿಯತ್ತ ತೆರಳುತ್ತಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಪುತ್ತೂರು ಶಾರದೆಯ ವೈಭವದ ಶೋಭಾಯಾತ್ರೆ ಜನರ ಗಮನ ಸೆಳೆದಿದೆ. ವರ್ಷದಿಂದ ವರ್ಷಕ್ಕೆ ಶೋಭಾಯಾತ್ರೆಯಲ್ಲಿ ಹೊಸತನವನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಜನರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ. “ಪುತ್ತೂರಿನಲ್ಲೇ ದಸರಾ ವೈಭವವನ್ನು ಜನರು ಕಣ್ತುಂಬಿಕೊಳ್ಳುವಂತಾಗಬೇಕು ಎಂಬ ಉದ್ದೇಶದಿಂದ ಶಾರದೋತ್ಸವಕ್ಕೆ ಪುತ್ತೂರು ದಸರಾ ಎಂಬ ವಿಶಾಲ ರೂಪ ನೀಡಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಪುತ್ತೂರು ತಾಲೂಕಿನ ಜನತೆಯ ದಸರಾ ಮಹೋತ್ಸವವಾಗಿ ಬೆಳೆಯಲಿದೆ” ಎಂದು ಸೀತಾರಾಮ ರೈ ಹೇಳಿದರು.
ಜೊತೆಗೆ ಸಮಯಪಾಲನೆ ಮತ್ತು ಶಿಸ್ತಿಗೆ ಆಧ್ಯತೆ ನೀಡಿದ್ದು. ಎಲ್ಲಾ ಕಾರ್ಯಕ್ರಮಗಳೂ ಸಮಯಕ್ಕೆ ಸರಿಯಾಗಿ ಆರಂಭಗೊಳ್ಳುತ್ತದೆ. ವಿಶೇಷವಾಗಿ ಈ ಬಾರಿ ಡಿ.ಜೆ ಮತ್ತು ಸಿಡಿಮದ್ದಿನ ಪರ್ದರ್ಶನ ಇರುವುದಿಲ್ಲ. ನಮ್ಮ ನಾಡಿನ ಸಂಸ್ಕೃತಿಗೆ ಹೆಚ್ಚು ಒತ್ತನ್ನು ನೀಡಿ ಈ ಬಾರಿಯ ಶಾರದೋತ್ಸವ ಆಚರಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾರದೋತ್ಸವದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು, ಗೌರವ ಮಾರ್ಗದರ್ಶಕ ಡಾ. ಸುರೇಶ್ ಪುತ್ತೂರಾಯ, ಉಪಾಧ್ಯಕ್ಷ ದಯಾನಂದ, ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಶೋಭಾಯಾತ್ರೆಯ ಸಂಚಾಲಕರಾದ ಕೃಷ್ಣ ಎಂ. ಅಳಿಕೆ ಮತ್ತು ನವೀನ್ ಕುಲಾಲ್ ಹಾಗೂ ಕೋಶಾಧಿಕಾರಿ ವಸಂತ್ ಕುಮಾರ್ ಉಪಸ್ಥಿತರಿದ್ದರು.























