ಕರ್ನಾಟಕ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದಾರೆ. , ಈ ಪ್ರಕರಣವು ಸಿದ್ದರಾಮಯ್ಯ ಅವರ ತೇಜೋವಧೆ ಮಾಡಲು ಮತ್ತು ಬ್ಲಾಕ್ಮೇಲ್ ಮಾಡುವ ಉದ್ದೇಶದಿಂದ ನಡೆಸಿದ ಸಂಚು. ಇದರಲ್ಲಿ ನಮ್ಮ ಪಕ್ಷದವರೂ (ಕಾಂಗ್ರೆಸ್) ಶಾಮೀಲಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಸ್ಟಿಂಗ್ ಆಪರೇಷನ್ನ ಹಿಂದಿನ ಉದ್ದೇಶದ ಬಗ್ಗೆ ಮಾತನಾಡಿದ ಯತೀಂದ್ರ, ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆಯೊಬ್ಬರು ಪುತ್ತೂರು ಟಿಕೆಟ್ಗಾಗಿ ಆಕಾಂಕ್ಷಿಯಾಗಿದ್ದರು ಎಂಬ ಮಾಹಿತಿ ಇದೆ. ಹಾಗಾಗಿ, ರಾಜಕೀಯ ಲಾಭಕ್ಕಾಗಿ ಮತ್ತು ಸಿದ್ದರಾಮಯ್ಯ ಹೆಸರನ್ನು ಕೆಡಿಸಲು ಈ ರೀತಿಯ ಕೃತ್ಯಕ್ಕೆ ಮುಂದಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಸಿದ್ದರಾಮಯ್ಯ ಘನತೆಯನ್ನು ಹಾಳುಮಾಡಲು, ಅವರ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ಇಡಲು ಮತ್ತು ಬ್ಲಾಕ್ಮೇಲ್ ಮಾಡಲು ಈ ಯತ್ನ ನಡೆದಿದೆ ಎಂದು ಯತೀಂದ್ರ ಆರೋಪಿಸಿದರು.
ಪೊಲೀಸರು ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ಇದೆ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ. ಒಂದು ವೇಳೆ ತನಿಖೆ ನಿರೀಕ್ಷಿತ ಮಟ್ಟದಲ್ಲಿ ನಡೆಯದಿದ್ದರೆ, ಮುಂದಿನ ಕ್ರಮಗಳ ಬಗ್ಗೆ ಯೋಚಿಸುವುದಾಗಿ ಅವರು ಹೇಳಿದರು. ಈ ಸ್ಟಿಂಗ್ ಆಪರೇಷನ್ ಹಿಂದೆ ಯಾರು ಇದ್ದಾರೆ, ನಮ್ಮ ಪಕ್ಷದವರೇ ಮಾಡಿದ್ದಾರೆಯೇ ಅಥವಾ ಬೇರೆಯವರ ಕೈವಾಡವಿದೆಯೇ ಎಂಬುದು ತನಿಖೆಯಿಂದ ಹೊರಬರಬೇಕು ಎಂದು ಅವರು ಹೇಳಿದರು.
ಪ್ರಕರಣದ ತನಿಖೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಈಗಾಗಲೇ ಪತ್ರಕರ್ತ ರಾಕೇಶ್ ಶೆಟ್ಟಿ ಸೇರಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ತಂದೆಯವರಿಗೂ ಸಂಪೂರ್ಣ ಮಾಹಿತಿ ಬಂದಿದೆ. ಈ ಷಡ್ಯಂತ್ರದಲ್ಲಿ ಎಷ್ಟೇ ಪ್ರಭಾವಿಗಳಾಗಿದ್ದರೂ, ಯಾರೇ ಭಾಗಿಯಾಗಿದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಿ ಬಂಧಿಸುವಂತೆ ತಂದೆಯವರೇ ಸ್ಪಷ್ಟವಾಗಿ ಹೇಳಿದ್ದಾರೆ’ ಎಂದು ತಿಳಿಸಿದರು.
ಈ ಸುಳ್ಳು ಆರೋಪಗಳಿಂದ ಸಿದ್ದರಾಮಯ್ಯ ಅವರು ತೀವ್ರ ಬೇಸರಗೊಂಡಿದ್ದಾರೆ ಎಂದು ಯತೀಂದ್ರ ತಿಳಿಸಿದರು. 40 ವರ್ಷಗಳ ತಮ್ಮ ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಎಂದಿಗೂ ಇಂತಹ ಕಳಂಕಕ್ಕೆ ಗುರಿಯಾಗಿಲ್ಲ. ತಮ್ಮ ರಾಜಕೀಯ ಜೀವನದ ಕೊನೆಯ ಹಂತದಲ್ಲಿ ಇಂತಹ ಗಂಭೀರ ಆರೋಪಗಳು ಕೇಳಿಬಂದಾಗ ಯಾರಾದರೂ ಬೇಸರಗೊಳ್ಳುವುದು ಸಹಜ. ಆದರೆ, ಸತ್ಯ ಅವರ ಕಡೆಯಿದೆ, ನಮ್ಮ ಕಡೆಯಿದೆ. ತನಿಖೆಯ ಮೂಲಕ ಸತ್ಯ ಹೊರಬರುತ್ತದೆ ಮತ್ತು ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ ಎಂದು ಯತೀಂದ್ರ ವಿಶ್ವಾಸ ವ್ಯಕ್ತಪಡಿಸಿದರು. ‘ತಂದೆ ಯಾವುದೇ ತಪ್ಪು ಮಾಡಿಲ್ಲ ಎಂದು ತಮ್ಮ ತಾಯಿ ಕೂಡ ದೃಢವಾಗಿ ನಂಬಿದ್ದಾರೆ’ ಎಂದು ಯತೀಂದ್ರ ತಿಳಿಸಿದರು. ಯಾರು ಏನೇ ಆರೋಪ ಮಾಡಿದರೂ, ಸತ್ಯ ಹೊರಬೀಳುವವರೆಗೂ ಎದುರಿಸಲು ಸಿದ್ಧ ಎಂದರು.
























