ಬೆಂಗಳೂರು: ರಾಜ್ಯ ಸರ್ಕಾರ ನಂದಿನಿ ಹಾಲು, ಮೊಸರು ಬೆಲೆ ಏರಿಕೆ ಮಾಡಿದ ಬೆನ್ನಲ್ಲೇ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಪ್ರಯಾಣ ದರವನ್ನು ಕೂಡ ಇಂದು ಹೆಚ್ಚಿಸಿದೆ.
ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಗೆ ಬರಲಿದೆ. ಕೆಎಸ್ ಆರ್ ಟಿಸಿ ಬಸ್ ದರ ಗರಿಷ್ಠ 9 ರೂಪಾಯಿ ಏರಿಕೆಯಾಗಿದೆ. ಬಿಎಂಟಿಸಿ ಬಸ್ ದರ ಪ್ರತಿ ಸ್ಟೇಜ್ ಗೆ 6 ರೂಪಾಯಿಯಿಂದ 10 ರೂಪಾಯಿಗೆ ಹೆಚ್ಚಳವಾಗಿದೆ. ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಸಾರಿಗೆ ಸಚಿವ ಭೈರತಿ ಸುರೇಶ್ ನೂತನ ದರ ಪ್ರಕಟಿಸಿದರು.
ಕೇಂದ್ರ ಸರ್ಕಾರ ಡೀಸೆಲ್ ಬೆಲೆ ಏರಿಕೆ ಮಾಡಿರುವುದರಿಂದ ಸಾರಿಗೆ ನಿಗಮಕ್ಕೆ ತುಂಬಾ ಹೊರೆಯಾಗುತ್ತಿದೆ. ಸಾರಿಗೆ ನಿಗಮದ ನಷ್ಟ ಭರಿಸಲು ಬೆಲೆ ಏರಿಕೆ ಅನಿವಾರ್ಯವಾಗಿದೆ. ಉಚಿತ ಬಸ್ ಪ್ರಯಾಣದಿಂದ ನಿಗಮಗಳಿಗೆ ನಷ್ಟವಾಗುತ್ತಿಲ್ಲ, ಮಹಿಳೆಯರ ಟಿಕೆಟ್ ಹಣವನ್ನು ಸರ್ಕಾರವೇ ಭರಿಸುತ್ತಿದೆ ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. ಡೀಸೆಲ್ ದರ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಾದಾಗ ಮಾತ್ರ ಟಿಕೆಟ್ ದರ ಏರಿಸಲು ನಿಗಮಗಳಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.

























