ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರವಾಸಿ ವಾಹನಗಳಿಗೆ ವಿಧಿಸಲಾಗುತ್ತಿರುವ ಅವೈಜ್ಞಾನಿಕ ಶುಲ್ಕ ಹಾಗೂ ವಾಹನ ಚಾಲಕರ ಮೇಲಿನ ದಬ್ಬಾಳಿಕೆ ವಿರೋಧಿಸಿ, ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಟ್ಯಾಕ್ಸಿ ಸಂಘಟನೆಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಗುರುವಾರ 4ನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರವೂ ಮುಂದುವರಿಯಲಿದೆ.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ 8 ನಿಮಿಷಗಳವರೆಗೆ ಉಚಿತ ಪ್ರವೇಶವಿದ್ದು, ಪಿಕ್ಅಪ್ ಮತ್ತು ಡ್ರಾಪ್ಗೆ ಯಾವುದೇ ಶುಲ್ಕವಿಲ್ಲ. ಆದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಪ್ರವೇಶಿಸಿದ ತಕ್ಷಣ ಡ್ರಾಪ್ಗೆ 50 ರೂಪಾಯಿ ಮತ್ತು ಪಿಕ್ಅಪ್ಗೆ 180 ರೂಪಾಯಿ ಶುಲ್ಕ ವಿಧಿಸುವ ಮೂಲಕ ಹಗಲು ದರೋಡೆ ನಡೆಸಲಾಗುತ್ತಿದೆ. ಮಂಗಳೂರು ಇರುವುದು ಭಾರತದಲ್ಲೇ ಹೊರತು ವಿದೇಶದಲ್ಲಲ್ಲ ಇಲ್ಲಿ ಇಂತಹ ತಾರತಮ್ಯ ಏಕೆ? ಪ್ರಶ್ನಿಸಿದರು.
ಬಿಜೆಪಿ ಶಾಸಕರು ಮತ್ತು ಸಂಸದರೇ, ಪ್ರತಿಭಟನಾ ಸ್ಥಳಕ್ಕೆ ಬಂದು ‘ನಾವು ನಿಮ್ಮೊಂದಿಗಿದ್ದೇವೆ’ ಎಂದು ಹೇಳಿ ಜನರನ್ನು ಮಂಗ ಮಾಡುವ ನಾಟಕ ಬೇಡ. ಅದಾನಿ ಸಂಸ್ಥೆಗೆ ವಿಮಾನ ನಿಲ್ದಾಣವನ್ನು ನೀಡಿದ್ದು ನಿಮ್ಮದೇ ಕೇಂದ್ರ ಸರ್ಕಾರ. ಈ ಸಮಸ್ಯೆಯ ಕುರಿತು ನೀವು ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೀರಾ? ಯಾವ ಕ್ರಮ ಕೈಗೊಂಡಿದ್ದೀರಿ ಎಂಬುದನ್ನು ಜನರ ಮುಂದೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಸಾಲ ಮಾಡಿ ಒಂದೆರಡು ಟ್ಯಾಕ್ಸಿಗಳನ್ನು ಇಟ್ಟುಕೊಂಡು ಬದುಕು ಕಟ್ಟಿಕೊಂಡಿರುವ ಬಡ ಚಾಲಕರ ಹೊಟ್ಟೆ ಮೇಲೆ ಹೊಡೆಯುವ ಕೆಲಸವನ್ನು ಸಹಿಸಲು ಸಾಧ್ಯವಿಲ್ಲ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರ ತಾಳ್ಮೆಯನ್ನು ಪರೀಕ್ಷಿಸಬೇಡಿ. ರಾಜ್ಯದ ಕಾಂಗ್ರೆಸ್ ಸರ್ಕಾರವು ರನ್ವೇ ವಿಸ್ತರಣೆ ವಿಚಾರದಲ್ಲಿ ಅದಾನಿ ಸಂಸ್ಥೆಯ ಮೇಲೆ ಒತ್ತಡ ಹೇರಿ 40 ಕೋಟಿ ರೂಪಾಯಿ ಡೆಪಾಸಿಟ್ ಇಡುವಂತೆ ಮಾಡಿದೆ. ಟ್ಯಾಕ್ಸಿ ಚಾಲಕರ ಈ ನ್ಯಾಯಯುತ ಹೋರಾಟಕ್ಕೆ ಕಾಂಗ್ರೆಸ್ ಪಕ್ಷವು ಸದಾ ಬೆಂಬಲವಾಗಿ ನಿಲ್ಲಲಿದೆ ಎಂದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಮುಖಂಡರಾದ ಬಿ.ಎಂ.ಭಟ್, ಅಸೋಸಿಯೇಷನ್ ಅಧ್ಯಕ್ಷ ರಘುಪತಿ ಭಟ್ ಮೊದಲಾದವರಿದ್ದರು.

























