ಮುಂಬೈ: ಲೋನಾವಾಲಾದ ಭೂಶಿ ಡ್ಯಾಂಗೆ ಪ್ರವಾಸಕ್ಕೆ ಬಂದಿದ್ದ ಓರ್ವ ಮಹಿಳೆ ಹಾಗೂ ನಾಲ್ವರು ಅಪ್ರಾಪ್ತರು ಹಠಾತ್ ಪ್ರವಾಹಕ್ಕೆ ಸಿಕ್ಕಿ ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ.
ಪ್ರವಾಸಕ್ಕೆ ಬಂದಿದ್ದ ವೇಳೆ ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ನೀರಿನ ಹರಿವು ಹಠಾತ್ ಹೆಚ್ಚಾಗಿದ್ದು, 36 ವರ್ಷದ ಓರ್ವ ಮಹಿಳೆ, ಇಬ್ಬರು ಬಾಲಕಿಯರು ಹಾಗೂ ಇಬ್ಬರು ಬಾಲಕರು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದಾರೆ. ಮೂವರ ಶವ ಪತ್ತೆಯಾಗಿದ್ದು, ಇಬ್ಬರ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟವರೆಲ್ಲಾ ಒಂದೇ ಕುಟುಂಬದವರು ಎಂದು ತಿಳಿದು ಬಂದಿದೆ. ಅವರೆಲ್ಲ ಜೂ.30ರ ಮಧ್ಯಾಹ್ನ ಅಣೆಕಟ್ಟಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಸುಮಾರು 1:30ಕ್ಕೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಲಪಾತದಲ್ಲಿ ಕೊಚ್ಚಿಹೋದ ಶಾಹಿಸ್ತಾ ಅನ್ಸಾರಿ, ಅಮಿಮಾ ಅನ್ಸಾರಿ ಮತ್ತು ಉಮೇರಾ ಅನ್ಸಾರಿ ಈ ಮೂವರ ಮೃತದೇಹಗಳು ಸಿಕ್ಕಿವೆ. ಇನ್ನೂ 9 ವರ್ಷದ ಮರಿಯಾ ಸೈಯದ್ ಹಾಗೂ 4 ವರ್ಷದ ಅದ್ನಾನ್ ಅನ್ಸಾರಿ ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ.
ಈ ಹಿಂದೆ ಏಪ್ರಿಲ್ನಲ್ಲಿ ಕರ್ನಾಟಕದ ರಾಮನಗರ ಜಿಲ್ಲೆಯ ಕಾವೇರಿ ನದಿಯ ಸಂಗಮದಲ್ಲಿ ಮೂವರು ವಿದ್ಯಾರ್ಥಿನಿಯರು ಸೇರಿದಂತೆ ಐವರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ್ದರು. ವಿದ್ಯಾರ್ಥಿಗಳು ಈಜಾಡುತ್ತಿದ್ದ ವೇಳೆ ಈ ಘಟನೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.