ಐಪಿಎಸ್ ಅಧಿಕಾರಿ ಚಂದ್ರಶೇಖರ್ ಅವರು ತಮ್ಮ ವಿರುದ್ಧ ಸಲ್ಲಿಸಿರುವ ದೂರಿನ ವಿಚಾರವಾಗಿ ಕೋರ್ಟ್ ನಲ್ಲೇ ಉತ್ತರಿಸುತ್ತೇನೆ ಎಂದು ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಐಪಿಎಸ್ ಆಧಿಕಾರಿ ಚಂದ್ರಶೇಖರ್, ಕೇಂದ್ರ ಸಚಿವ ಕುಮಾರಸ್ವಾಮಿ ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಸಂಜಯನಗರ ಪೊಲೀಸರಿಗೆ ದೂರು ನೀಡಿರುವ ಬಗ್ಗೆ ಬೆಂಗಳೂರಿನಲ್ಲಿಂದು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ನಾನು ಯಾವಾಗ ಬೆದರಿಕೆ ಹಾಕಿದ್ದೇನೆ. ಎಲ್ಲವನ್ನು ನಿಮ್ಮ ಮುಂದೆಯೇ ಮಾತನಾಡಿದ್ದೇನೆ. ನಿಮ್ಮ ಮುಂದೆ ಬೆದರಿಕೆ ಹಾಕಿ ಮಾತನಾಡಿದ್ದೇನಾ ಎಂದು ಹೇಳಿ, ನ್ಯಾಯಾಲಯದಲ್ಲಿ ಇದಕ್ಕೆಲ್ಲಾ ಉತ್ತರ ಕೊಡುತ್ತೇನೆ ಎಂದು ಹೇಳಿದರು.
ಅಲ್ಲದೆ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಅವರ ಬಗ್ಗೆ ಕೆಲ ವಿಚಾರಗಳ ಪ್ರಶ್ನೆ ಮಾಡಿದ್ದೆ. ಪಾಪ ಅವರು ದೂರು ಕೊಟ್ಟಿದ್ದಾರೆ. ಎಲ್ಲವನ್ನೂ ನ್ಯಾಯಾಲಯದಲ್ಲಿ ಎದುರಿಸುತ್ತೇನೆ. ಈ ವಿಚಾರ ನ್ಯಾಯಾಲಯದಲ್ಲಿ ಬರಲಿ ನಾನು ಎಲ್ಲೂ ಹೋಗುವ ಪ್ರಶ್ನೆಯೇ ಇಲ್ಲ. ನಾನು ಅವರಿಗೆ ಹೆದರಬೇಕಾಗಿಲ್ಲ, ಅವರು ನನಗೆ ಹೆದರಬೇಕಾಗಿಲ್ಲ. ನನ್ನ ವಿರುದ್ಧ 12 ವರ್ಷಗಳಿಂದ ಪ್ರಕರಣ ನಡೆಯುತ್ತಿದೆ. ಯಾವಾಗ ನ್ಯಾಯಾಲಯ ಕರೆದರೂ ವಿಚಾರಣೆಗೆ ಹೋಗಿದ್ದೇನೆ. ರಾಜಕೀಯವಾಗಿ ನನ್ನ ವಿರುದ್ಧ ದೂರು ನೀಡಲಾಗಿದೆ. ನ್ಯಾಯಾಲಯದಲ್ಲಿ ನಮ್ಮ ಪರ ವಕೀಲರು ಸೂಕ್ತ ಸಮಜಾಯಿಷಿ ಕೊಡುತ್ತಾರೆ ಎಂದರು.
ಅಂದಹಾಗೆ ಕರ್ನಾಟಕ ಕೆಡರ್ನಿಂದ ಬೇರೆ ರಾಜ್ಯಕ್ಕೆ ಕಳಿಸುವ ಬೆದರಿಕೆ ಹಾಗೂ ಸುಳ್ಳು ಆರೋಗ್ಯ ಪ್ರಮಾಣಪತ್ರ ಪಡೆದಿದ್ದಾರೆಂದು ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಎಚ್ ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಸುರೇಶ್ ಬಾಬು ವಿರುದ್ಧ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಗೆ ಚಂದ್ರಶೇಖರ್ ದೂರು ನೀಡಿದ್ದು, ಅವರ ದೂರು ಆಧರಿಸಿ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ.
ಇನ್ನು, ಬಿಡದಿಯ ಕೇತಿಗಾನಹಳ್ಳಿಯ ತೋಟದ ಮನೆಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ 5 ಜಿಪಂ ಕ್ಷೇತ್ರ ಹಾಗೂ ಟೌನ್ ಭಾಗದಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದೇವೆ. ಜೆಡಿಎಸ್- ಬಿಜೆಪಿ ಎರಡು ಪಕ್ಷಗಳು ಹೊಂದಾಣಿಕೆಯಲ್ಲಿ ಕೆಲಸ ಮಾಡಬೇಕು. ನವೆಂಬರ್ ಒಳಗೆ ಮಹಾರಾಷ್ಟ್ರ ಹಾಗೂ ಜಾರ್ಖಾಂಡ್ ಚುನಾವಣೆ ನಡೆಯಬೇಕಿದೆ. ಅದೇ ಸಮಯದಲ್ಲಿ ಚನ್ನಪಟ್ಟಣ ಬೈ ಎಲೆಕ್ಷನ್ ಕೂಡ ನಡೆಯಲಿದೆ. ಇನ್ನೂ ಒಂದು ವಾರದಲ್ಲಿ ಚುನಾವಣೆ ಘೋಷಣೆಯಾಗಲಿದೆ. ಅಂತಿಮವಾಗಿ ದೆಹಲಿ ಮಟ್ಟದಲ್ಲಿ ಬಿಜೆಪಿಯ ಹೈಕಮಾಂಡ್ ಹಾಗೂ ನಾವು ಕೂತು ಚರ್ಚೆ ಮಾಡ್ತೇವೆ ಎಂದು ಹೇಳಿದರು.
ಅಲ್ಲದೇ, ಕಳೆದ ಎರಡು ಬಾರಿ ಜೆಡಿಎಸ್ ನಿಂದ ಗೆದ್ದಿದ್ದೇವೆ, ಈ ಹಿಂದಿನಿಂದಲೂ ಇದು ಜೆಡಿಎಸ್ ನ ಕ್ಷೇತ್ರ. ನಮ್ಮಲ್ಲಿನ ಸಂಘಟನೆಯಲ್ಲಿ ಕೆಲವೊಂದು ಲೋಪದೋಷಗಳಿಂದ ಹಿಂದೆ ಬಿದ್ದಿದ್ದೇವು, 2013ರಲ್ಲೂ ನಮಗೆ ಹೆಚ್ಚಿನ ಮತಗಳು ಬಂದಿದ್ದವು. ಚನ್ನಪಟ್ಟಣದಲ್ಲಿ ಕಾರ್ಯಕರ್ತರೇ ನನ್ನ ಚುನಾವಣೆ ನಡೆಸಿದ್ದಾರೆ. ನಮ್ಮ ಸಂಘಟನೆ ದೃಷ್ಟಿಯಿಂದ ಕೂತು ಚರ್ಚೆ ಮಾಡ್ತೇವೆ. ಯಾವುದೇ ಸಮಸ್ಯೆ ಆಗದ ರೀತಿ ಚುನಾವಣೆ ನಡೆಸುತ್ತೇವೆ ಎಂದು ಹೇಳುವ ಮೂಲಕ ಚುನಾವಣೆಯಲ್ಲಿ ಜೆಡಿಎಸ್ ಚಿಹ್ನೆಗೆ ಉಳಿಸಿಕೊಳ್ಳುವ ಸುಳಿವು ನೀಡಿದ್ದಾರೆ.