ಮಂಗಳೂರು ಹಾಗೂ ಕೇರಳಕ್ಕೆ ಮಾದಕವಸ್ತು ಪೂರೈಕೆ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೇರಳದ ಕೋಝಿಕ್ಕೋಡ್ನ ಶಮೀರ್ ಪಿ.ಕೆ (42) ಬಂಧಿತ ಆರೋಪಿ. ಆರೋಪಿ ಬಳಿ ಇದ್ದ 73 ಲಕ್ಷ ಮೌಲ್ಯದ ಹೈಡ್ರೋವೀಡ್ ಗಾಂಜಾವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿದೇಶದಿಂದ ಗೋವಾಕ್ಕೆ ಬಂದ ಗಾಂಜಾವನ್ನು ಆರೋಪಿ ಶಮೀರ್ ಪಿ.ಕೆ ಕಾರಿನಲ್ಲಿ ತುಂಬಿಕೊಂಡು ಮಂಗಳೂರಿಗೆ ಬರುತ್ತಿದ್ದನು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಪ್ರವೃತ್ತರಾಗಿ ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿಯ ಬಪ್ಪನಾಡು ಬಳಿ ಆರೋಪಿ ಶಮೀರ್ ಪಿ.ಕೆಯನ್ನು ತಡೆದಿದ್ದಾರೆ. ಮಾಲು ಸಮೇತ ಸಿಕ್ಕ ಶಮೀರ್ ಪಿ.ಕೆಯನ್ನು ಬಂಧಿಸಿದ್ದಾರೆ. 738 ಗ್ರಾಂ ಹೈಡ್ರೋವೀಡ್ ಗಾಂಜಾ, ಕಾರು, ಮೊಬೈಲ್ ವಶ ಪಡಿಸಿಕೊಂಡಿದ್ದಾರೆ. ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.