ಉಡುಪಿ: ನಗರ ಹಾಗೂ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳು ಬೀದಿ ಶ್ವಾನಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಶ್ವಾನ ಕಡಿತ ಪ್ರಕರಣಗಳು ಹೆಚ್ಚುತ್ತಿದೆ. ಈ ಬಗ್ಗೆ ಅನೇಕ ದೂರುಗಳು ಬರುತ್ತಿವೆ. ಶ್ವಾನಗಳ ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆಗೆ ನಗರ ಹಾಗೂ ಗ್ರಾಮೀಣ ಮಟ್ಟದ ಸ್ಥಳೀಯ ಸಂಸ್ಥೆಗಳು ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ಸಂತಾನ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಸೂಚನೆ ನೀಡಿದರು.
2023-24ನೇ ಸಾಲಿನಲ್ಲಿ 1,576 ಗಂಡು ಹಾಗೂ 1,878 ಹೆಣ್ಣು ಸೇರಿದಂತೆ 3,454 ಶ್ವಾನಗಳಿಗೆ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಡಿಸೆಂಬರ್‌ವರೆಗೆ 481 ಗಂಡು, 981 ಹೆಣ್ಣುಸೇರಿದಂತೆ 1,462 ಶ್ವಾನಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಪ್ರಸಕ್ತ ಸಾಲಿನ ಮಾರ್ಚ್ ಒಳಗಾಗಿ ಶಸ್ತ್ರ ಚಿಕಿತ್ಸೆಯನ್ನು ಕಳೆದ ವರ್ಷಕ್ಕಿಂತ ಹೆಚ್ಚು ಮಾಡಬೇಕು ಎಂದರು.
ಸ್ಥಳೀಯ ಸಂಸ್ಥೆಗಳು ಪ್ರತೀ 3 ತಿಂಗಳಿಗೊಮ್ಮೆ ಬೀದಿ ಶ್ವಾನಗಳ ಗಣತಿ ಕಾರ್ಯ ಕೈಗೊಳ್ಳಬೇಕು. ತತ್‌ಕ್ಷಣದಲ್ಲಿ ಗಣತಿ ಕಾರ್ಯ ಕೈಗೊಳ್ಳಲು ಸಾಧ್ಯವಾಗದೆ ಇದ್ದಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಜನ ಸಂಖ್ಯೆಯ ಶೇ. 2ರಷ್ಟು ಬೀದಿಶ್ವಾನಗಳು ಇವೆ ಎಂದು ಪರಿಗಣಿಸಿ, ಒಟ್ಟು ಶ್ವಾನಗಳ ಅರ್ಧ ದಷ್ಟು ಪ್ರತೀ ವರ್ಷ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿರುವ ಶ್ವಾನಗಳ ಸಂಖ್ಯೆ ಎಂದು ಪರಿಗಣಿಸಬೇಕು ಎಂದರು.
ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಬೀದಿ ಶ್ವಾನಗಳು ಆಕ್ರಮಣ ಮಾಡಿ ಕಚ್ಚಿದಾಗ ಪರಿಹಾರವನ್ನು 5,000 ರೂ., ಒಂದೊಮ್ಮೆ ವ್ಯಕ್ತಿ ಮರಣ ಹೊಂದಿದಲ್ಲಿ 5 ಲಕ್ಷ ರೂ. ಗಳನ್ನು ಸ್ಥಳೀಯ ಸಂಸ್ಥೆಗಳೇ ಸಂತ್ರಸ್ತ ಕುಟುಂಬಕ್ಕೆ ನಿಯಮಾನುಸಾರ ವಿತರಿಸಬೇಕು ಎಂದರು.
ಅಪಘಾತ, ಅನಾರೋಗ್ಯ ಸೇರಿದಂತೆ ಮತ್ತಿತರ ನ್ಯೂನ್ಯತೆ ಹೊಂದಿದ ಪ್ರಾಣಿಗಳನ್ನು ಕೆಲವು ಖಾಸಗಿ ಸಂಸ್ಥೆಗಳು ಸರಿಯಾಗಿ ಪಾಲನೆ, ಚಿಕಿತ್ಸೆ ಮಾಡುತ್ತಿಲ್ಲ ಎಂಬ ದೂರುಗಳಿವೆ. ಈ ಬಗ್ಗೆ ಅರಣ್ಯ ಇಲಾಖೆ, ಪಶು ಪಾಲನಾ ಇಲಾಖೆಯವರು ಸೂಕ್ತ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾ ಕಾರದ ಸದಸ್ಯ ಕಾರ್ಯದರ್ಶಿ ಯೋಗೀಶ್, ಪ್ರಭಾರ ಅಪರ ಜಿಲ್ಲಾ ಧಿಕಾರಿ ನಾಗರಾಜ್ ವಿ. ನಾಯಕ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ| ಎಂ.ಸಿ ರೆಡ್ಡಪ್ಪ, ಮತ್ತಿತರರಿದ್ದರು.