ರಾಜ್ಯದಲ್ಲಿ ಬಿಜೆಪಿಯ ಈಗಿನ ಕಥೆ ಮನೆಯೊಂದು ಬಾಗಿಲುಗಳು ಹತ್ತಾರು ಎಂಬಂತಾಗಿದೆ. ಅಸಮಾಧಾನಿತರು, ತಟಸ್ಥರು, ಅವಕಾಶವಾದಿಗಳು ಹೀಗೆ ಹತ್ತಾರು ನಾಯಕರ ಗುಂಪುಗಳಿಂದ ವಿಭಜನೆಗೊಳ್ಳುತ್ತಾ ಸಾಗುತ್ತಿದ್ದು, ನಿಷ್ಠಾವಂತ ನಾಯಕರು ಮತ್ತು ಕಾರ್ಯಕರ್ತರು ಲೆಕ್ಕಕ್ಕಿಲ್ಲದಂತಾಗಿ ಮೂಲೆ ಸೇರುವಂತಾಗಿದೆ. ಹಿರಿಯ ಮತ್ತು ಕಿರಿಯ ನಾಯಕರ ನಡುವೆ ಹಗ್ಗಜಗ್ಗಾಟಗಳು ಶುರುವಾಗಿದ್ದು, ಪ್ರತಿಷ್ಠೆಯ ಕಾರಣದಿಂದಾಗಿ ಪಕ್ಷದ ಪ್ರಾಬಲ್ಯ ಮಣ್ಣುಪಾಲಾಗುವ ಲಕ್ಷಣಗಳು ಎದ್ದು ಕಾಣಿಸುತ್ತಿವೆ.
ಹಿರಿಯನಾಯಕ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಎಂಬ ಕಾರಣಕ್ಕೆ ಮತ್ತು ಹಿರಿಯರೊಂದಿಗೆ ಕಿರಿಯರನ್ನು ಒಟ್ಟಾಗಿ ಕೊಂಡೊಯ್ಯುವ ಮತ್ತು ಪಕ್ಷ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುವ ಚಾಕಚಕ್ಯತೆಯಿದೆ ಎಂದು ಬಿ.ವೈ.ವಿಜಯೇಂದ್ರರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ನೀಡಿರಲಿಲ್ಲ. ಅದಾಗಲೇ ಬಿ.ಎಸ್.ಯಡಿಯೂರಪ್ಪರಿಂದ ಸಿಎಂ ಸ್ಥಾನವನ್ನು ಕಿತ್ತು ಬಸವರಾಜಬೊಮ್ಮಾಯಿ ಅವರಿಗೆ ನೀಡಿರುವುದು ಮಾತ್ರವಲ್ಲದೆ, ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿದ್ದಾರೆ ಎಂಬ ಕಳಂಕವನ್ನು ತೊಡೆದುಹಾಕಲು ಹೈಕಮಾಂಡ್ ಪಟ್ಟ ನೀಡಿತ್ತು.
ನಿಜ ಹೇಳಬೇಕೆಂದರೆ ನಳೀನ್ ಕುಮಾರ್ ಕಟೀಲ್ ಅಧ್ಯಕ್ಷರಾಗಿದ್ದ ಕಾಲದಲ್ಲಿ ಪಕ್ಷದಲ್ಲಿ ಭಿನ್ನಮತವಿತ್ತಾದರೂ ಈಗಿನಂತೆ ಅದು ಬೀದಿಗೆ ಬಿದ್ದಿರಲಿಲ್ಲ. ಆದರೆ ಹಿಂದೂ ಕಾರ್ಯಕರ್ತರಲ್ಲಿ ತಾವು ಕಟ್ಟಿ ಬೆಳೆಸಿದ ಪಕ್ಷ ಅಧಿಕಾರದಲ್ಲಿದ್ದರೂ ತಮಗೆ ರಕ್ಷಣೆ ಇಲ್ಲ ಎಂಬ ಆಕ್ರೋಶವಿತ್ತು. ಅದನ್ನು ಹಿಂದೂ ಕಾರ್ಯಕರ್ತರ ಕೊಲೆಯಾದಾಗ ಹೊರ ಹಾಕಲಾಗಿತ್ತು. ಅದನ್ನು ಹೊರತುಪಡಿಸಿದರೆ ಇವತ್ತಿನಂತೆ ತೀವ್ರತೆ ಪಡೆದುಕೊಂಡಿರಲಿಲ್ಲ. ನಳೀನ್ ಕುಮಾರ್ ಕಟೀಲ್ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟವನ್ನು ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರರಿಗೆ ಕಟ್ಟಿದ ಬಳಿಕ ಪಕ್ಷದೊಳಗೆ ಅಸಮಾಧಾನ ತಾರಕಕ್ಕೇರಿದೆ.
ಈ ಹಿಂದೆ ಯಡಿಯೂರಪ್ಪ ಅವರು ಬಿಜೆಪಿಯನ್ನು ಬಿಟ್ಟು ಕೆಜೆಪಿ ಕಟ್ಟಿದಾಗ ಲಿಂಗಾಯಿತರು ಅವರ ಬೆನ್ನಿಗೆ ನಿಂತಿದ್ದರು. ಒಂದಷ್ಟು ನಾಯಕರು ಅವರ ಜತೆಗೆ ಪಕ್ಷ ಬಿಟ್ಟು ಹೋದ ಕಾರಣದಿಂದಾಗಿ ಬಿಜೆಪಿ ಸಂಕಷ್ಟ ಅನುಭವಿಸಿತ್ತು. ಇದರ ಅರಿವಿದ್ದ ಹೈಕಮಾಂಡ್ ಬಿಎಸ್ ವೈನ್ನು ಸಿಎಂ ಸ್ಥಾನದಿಂದ ಇಳಿಸಿದ ಕಳಂಕ ಹೋಗಲಾಡಿಸಲು ಮತ್ತು ಲಿಂಗಾಯಿತ ನಾಯಕರ ಒಲವು ಗಳಿಸಲು ವಿಜಯೇಂದ್ರರಿಗೆ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ಆದರೆ ದುರಂತವೇನೆಂದರೆ ಇವತ್ತು ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸುವಂತೆ ಒತ್ತಾಯ ಮಾಡುತ್ತಿರುವವರಲ್ಲಿ ಲಿಂಗಾಯಿತ ನಾಯಕರೇ ಮುಂಚೂಣಿಯಲ್ಲಿದ್ದಾರೆ.