ಪುತ್ತೂರು: ಪುತ್ತೂರಿಗೆ ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜು ಘೋಷಣೆಯಾದ ಮರುದಿನವೇ ಬೆಂಗಳೂರಿನ ನಮ್ಮ ಕೇಂದ್ರ ಕಚೇರಿಯಿಂದ ಆದೇಶ ಬಂದಿದೆ. ಈ ಹಿನ್ನಲೆಯಲ್ಲಿ ಸೇಡಿಯಾಪು ಬಳಿಯ 40 ಎಕರೆ ಪ್ರದೇಶವನ್ನು ಜಿಪಿಎಸ್ ಮೂಲಕ ಪರಿಶೀಲನೆ ನಡೆಸಲಿದ್ದೇವೆ. ಪ್ರಥಮ ಹಂತದಲ್ಲಿ 25ಸಾವಿರದಿಂದ 30 ಸಾವಿರ ಚದರ ಮೀಟರ್ ವ್ಯಾಪ್ತಿಯಲ್ಲಿ ಮೊದಲ ಹಂತದ ಅಭಿವೃದ್ಧಿ ಕಾರ್ಯನಡೆಯಲಿದೆ. 300 ಬೆಡ್ ಹಾಗೂ 250 ವಿದ್ಯಾರ್ಥಿಗಳ ವ್ಯವಸ್ಥೆಗೆ ಪೂರಕವಾಗಿ ನಡೆಯಲಿದೆ. ಪ್ರಸ್ತುತ ನಾವು ವರದಿ ತಯಾರಿಸಿ ಸರ್ಕಾರಕ್ಕೆ ನೀಡಲಿದ್ದೇವೆ ಎಂದು ಆರೋಗ್ಯ ಇಲಾಖೆಯ ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಗುರುಪ್ರಸಾದ್ ತಿಳಿಸಿದರು.
ಭಾನುವಾರ ಪುತ್ತೂರು ಸೇಡಿಯಾಪು ಬಳಿಯಲ್ಲಿ ಮೆಡಿಕಲ್ ಕಾಲೇಜಿಗೆ ಕಾಯ್ದಿರಿಸಿದ ಜಾಗದ ಪರಿಶೀಲನೆ ಸಂದರ್ಭ ಶಾಸಕ ಅಶೋಕ್ ರೈ ಅಧ್ಯಕ್ಷತೆಯಲ್ಲಿ ನಡೆದ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಇರುವ ತಾಲೂಕು ಆಸ್ಪತ್ರೆಯ ಕಟ್ಟಡಗಳು ಹಳೆಯದಾಗಿವೆ. 4ಸಾವಿರ ಚದರ ಮೀ ನಷ್ಟು ಚಿಕ್ಕ ಜಾಗದಲ್ಲಿರುವ ಜಾಗದಲ್ಲಿ ಐಪಿಎಚ್‌ಎಸ್ ಹಾಗೂ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಅಸಾಧ್ಯವಾಗಿದೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಗೈಡ್‌ಲೆನ್ಸ್ ಪ್ರಕಾರ ಇಲ್ಲಿ ಮಾಡಲು ಸಾಧ್ಯವೇ ಇಲ್ಲ. ಹಾಗಾಗಿ ಸೇಡಿಯಾಪು ಬಳಿಯ ಹೊಸ ಜಾಗದಲ್ಲೇ ಆಸ್ಪತ್ರೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇಲ್ಲಿನ ಪ್ರಾಕೃತಿಕ ಪರಿಸರವನ್ನು ಆದಷ್ಟು ಉಳಿಸಿಕೊಂಡು ಆಸ್ಪತ್ರೆಯ ನಿರ್ಮಾಣಕ್ಕೆ ಚಿಂತನೆ ಮಾಡಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಶೋಕ್ ರೈ ಅವರು ಮೆಡಿಕಲ್ ಕಾಲೇಜು ಜಿಲ್ಲಾ ಮಟ್ಟಕ್ಕೆ ಮಾತ್ರ ಬರುವುದು. ತಾಲೂಕು ಕೇಂದ್ರಕ್ಕೆ ಯಾವತ್ತೂ ಬರುವುದಿಲ್ಲ ಎಂಬ ಮಾತುಗಳು ಸಾಕಷ್ಟು ಕೇಳಿಬಂದಿದ್ದವು. ಆದರೆ ಸತತ ಪ್ರಯತ್ನಕ್ಕೆ ಬಜೆಟಿನಲ್ಲಿ ಬೆಲೆ ಬಂದಿದೆ. ಟೀಕೆಗಳು ಸಹಜ ಆದರೆ ಈ ಟೀಕೆಗಳಿಗೆ ನಾನು ಕೆಲಸದ ಮೂಲಕವೇ ಉತ್ತರ ನೀಡುತ್ತೇನೆ. ಪ್ರಸ್ತುತ ಇಲ್ಲಿಗೆ ಅಗಮಿಸಿರುವ ಆರೋಗ್ಯ ಇಲಾಖೆಯ ಇಂಜಿಯರ್ ಗಳು ಸರ್ಕಾರದ ಸೂಚನೆ ಮೇರೆಗೆ ಬಂದಿದ್ದಾರೆ. ಗೊಂದಲ ಸೃಷ್ಟಿಸಿದವರಿಗೆ ಅತೀ ಶೀಘ್ರದಲ್ಲಿ ಉತ್ತರ ದೊರೆಯಲಿದೆ. ಮುಂದಿನ ವಾರ ಆರ್ಕಿಟೆಕ್ ಗಳು ಬರಲಿದ್ದಾರೆ. ಡಿಪಿಆರ್ ಮಾಡಿ ಮಾಸ್ಟರ್ ಪ್ಲಾನ್ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವ ಕಾರ್ಯ ನಡೆಯಲಿದೆ. 20 ಎಕರೆ ಪ್ರದೇಶ ಮೆಡಿಕಲ್ ಕಾಲೇಜಿಗೆ ಬೇಕಾಗುತ್ತದೆ. ಉಳಿದ ಜಾಗದಲ್ಲಿ ಮುಂದೆ ಆರ್ಯುವೇದಿಕ್ ಕಾಲೇಜು, ನರ್ಸಿಂಗ್ ಕಾಲೇಜು ಕೂಡಾ ಮಾಡಲು ಅನುಕೂಲವಾಗಬಹುದು. ಮೆಡಿಕಲ್-ಎನಿಮಲ್ ಹಬ್ ಮಾಡುವ ಚಿಂತನೆಯೂ ಇದೆ ಎಂದ ಅವರು ಮುಖ್ಯಮಂತ್ರಿಯವರನ್ನು ಕರೆದು ಶಿಲಾನ್ಯಾಸ ಮಾಡಲಾಗುವುದು ಎಂದು ತಿಳಿಸಿದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಮಾತನಾಡಿ, ಪುತ್ತೂರಿಗೆ ಮೆಡಿಕಲ್ ಕಾಲೇಜು ತರಲು ದೊಡ್ಡ ಮಟ್ಟದ ಶ್ರಮಪಟ್ಟಿರುವ ಶಾಸಕ ಅಶೋಕ್ ರೈ ಹಾಗೂ ನಮ್ಮ ಬೇಡಿಕೆಗೆ ಅಸ್ತು ಅಂದಿರುವ ಮುಖ್ಯಮಂತ್ರಿಯವರಿಗೆ ಅಭಿನಂದನೆಗಳು. ಸೇಡಿಯಾಪು ಮೆಡಿಕಲ್ ಕಾಲೇಜಿಗೆ ಸೂಕ್ತ ಜಾಗ. ಎಲ್ಲಾ ಭಾಗಗಳಿಂದಲೂ ಇಲ್ಲಿಗೆ ರಸ್ತೆ ಸಂಪರ್ಕಗಳಿವೆ. ಇಲ್ಲಿ ೩೦೦ ಬೆಡ್ ಆಸ್ಪತ್ರೆಯಾದರೆ ೪ ತಾಲೂಕುಗಳ ಜನತೆಗೂ ಅನುಕೂಲವಾಗಲಿದೆ ಎಂದರು.
ಮೆಡಿಕಲ್ ಕಾಲೇಜಿಗೆ ಸ್ಥಳದಾನಿಯಾಗಿರುವ ವಿಶ್ವಪ್ರಸಾದ್ ಸೇಡಿಯಾಪು ಅವರು ಮಾತನಾಡಿ, ಈ ಗುಡ್ಡದಲ್ಲಿ ಸಾಕಷ್ಟು ನೇರಳೆ ಮರಗಳಿವೆ. 100 ಹೆಚ್ಚು ವರ್ಷ ಆಯುಷ್ಯದ ಮಾವಿನ ಮರಗಳಿವೆ. ಇವುಗಳನ್ನು ಉಳಿಸುವ ಕೆಲಸವಾಗಬೇಕು. ಅಲ್ಲಲ್ಲಿ ನೀರಿನ ಸೆಲೆಗಳಿವೆ. ಹಾಗಾಗಿ ಭೂ ಅಗೆತ ಕಡಿಮೆ ಮಾಡಬೇಕು. ರಾಷ್ಟಿçÃಯ ಹೆದ್ದಾರಿಯ ಪೆರ್ನೆಯಿಂದ ರಸ್ತೆ ಸಂಪರ್ಕ ಇದೆ. ಪುತ್ತೂರು ಕೇಂದ್ರದಿದ ಬನ್ನೂರು ಮೂಲಕ ಇಲ್ಲಿಗೆ ಕೇವಲ 3 ಕಿಮೀ ದೂರ ಮಾತ್ರ ಇದೆ. ಕೋಡಿಂಬಾಡಿಯಿದಲೂ ರಸ್ತೆ ವ್ಯವಸ್ಥೆಗೆ ಅನುಕೂಲ ಇದೆ ಎಂದರು.
ಪುತ್ತೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಪೂಡಾ ಅಧ್ಯಕ್ಷ ಅಮಲ ರಾಮಚಂದ್ರ, ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಎಂಎಸ್ ಮಹಮ್ಮದ್, ವರ್ತಕ ಸಂಘದ ಪ್ರಧಾನ ಕಾರ್ಯದರ್ಶಿ ಮನೋಜ್, ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾಜ್ಯೋತಿ ಮತ್ತಿತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಪದ್ಮನಾಭ ಪೂಜಾರಿ ಸಣ್ಣಗುತ್ತು, ಕೆ. ಪಿ. ಆಳ್ವ, ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಝೇವಿಯರ್ ಡಿಸೋಜ , ಜಾಗ ದಾನಿ ಸೇಡಿಯಾಪು ಜನಾರ್ಧನ ಭಟ್, ಪುತ್ತೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿನಯ ಸುವರ್ಣ ಮತ್ತು ಈಶ್ವರ ಬೇಡೇಕರ್, ಆರೋಗ್ಯ ಇಲಾಖೆಯ ಸಹಾಯಕ ಇಂಜಿನಿಯ್ ಸುಧಾಕರ್, ಪೂಡಾ ಸದಸ್ಯ ನಿಹಾಲ್ ರೈ ಮತ್ತಿತರರು ಇದ್ದರು.