ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಪಿಡಬ್ಲ್ಯುಡಿ ರಸ್ತೆ ಅಭಿವೃದ್ದಿ, ಹಾರಾಡಿ ರೈಲ್ವೇ ಸೇತುವೆ ಅಭಿವೃದ್ದಿ ಹಾಗೂ ಪುತ್ತೂರಿನ ರಿಂಗ್ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡುವಂತೆ ಆಗ್ರಹಿಸಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರಿಗೆ ಪುತ್ತೂರು ಶಾಸಕ ಅಶೋಕ್ ರೈ ಅವರು ಮನವಿ ಸಲ್ಲಿಸಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಶಾಸಕರು ತನ್ನ ಕ್ಷೇತ್ರದ ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಒಳಪಡುವ ಅನೇಕ ರಸ್ತೆಗಳು ನಾದುರಸ್ಥಿಯಲ್ಲಿದ್ದು ಇದರ ಅಭಿವೃದ್ದಿಗೆ 32 ಕೋಟಿ ಅನುದಾನದ ಅಗತ್ಯವಿದೆ. ಬಹಳ ವರ್ಷಗಳ ಹಿಂದೆ ಈ ರಸ್ತೆಯನ್ನು ಅಭಿವೃದ್ದಿ ಮಾಡಲಾಗಿದ್ದು ಆ ಬಳಿಕ ಈ ರಸ್ತೆ ಡಾಮರನ್ನೇ ಕಂಡಿಲ್ಲ. ಲೋಕೋಪಯೋಗಿ ಇಲಖಾ ವ್ಯಾಪ್ತಿಗೆ ಒಳಪಡುವ ಈ ರಸ್ತೆಗಳನ್ನು ಮಳೆಗಾಲ ಮುಗಿದ ಬಳಿಕ ಅಭಿವೃದ್ದಿ ಮಾಡಬೇಕಿದ್ದು ಇದಕ್ಕೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು.
ಪುತ್ತೂರು ಉಪ್ಪಿನಂಗಡಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯಲಿದ್ದು ಇದಕ್ಕಾಗಿ ಹಾರಾಡಿಯಲ್ಲಿರುವ ರೈಲ್ವೇ ಸೇತುವೆಯನ್ನು ಅಗಲೀಕರಣ ಮಾಡಬೇಕಾಗಿದೆ. ಇದಕ್ಕಾಗಿ ಈಗಾಗಲೇ ಎಸ್ಟಿಮೇಟ್ ಸಿದ್ದಪಡಿಸಲಾಗಿದ್ದು ರೂ 8 ಕೋಟಿ ಅನುದಾನವನ್ನು ರಾಜ್ಯ ಸರಕಾರದಿಂದ ಪಾವತಿ ಮಾಡಬೇಕಿದೆ. ಈ ಸೇತುವೆಯ ಕಾಮಗಾರಿಗೆ ಅನುದಾನವನ್ನು ಒದಗಿಸುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ, ಇದಲ್ಲದೆ ಪುತ್ತೂರಿಗೆ ರಿಂಗ್ ರೋಡು ಮಾಡುವಲ್ಲಿಯೂ ಅನುದಾನದ ಬೇಡಿಕೆಯನ್ನು ಸಲ್ಲಿಸಿದ್ದಾರೆ.
ಒಟ್ಟು 40 ಕೋಟಿ ಅನುದಾನದ ಬೇಡಿಕೆಯನ್ನು ಸಚಿವರಿಗೆ ಸಲ್ಲಿಸಿದ್ದೇನೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪಿಡಬ್ಲ್ಯುಡಿ ರಸ್ತೆಗಳು ತುಂಬಾ ಹದಗೆಟ್ಟಿದೆ. ಕ್ಷೇತ್ರದ ಜನತೆಯ ಬೇಡಿಕೆಯನ್ನು ಈಡೇರಿಸುವಲ್ಲಿ ಶತಮೀರಿ ಪ್ರಯತ್ನವನ್ನು ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲಾ ರಸ್ತೆಗಳು ಅಭಿವೃದ್ದಿ ಹೊಂದಲಿದೆ.
ಅಶೋಕ್ ರೈ ಶಾಸಕರು, ಪುತ್ತೂರು