ಪುತ್ತೂರು: ಏಪ್ರಿಲ್ 26ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನ ಸಂದರ್ಭದಲ್ಲಿ ಪ್ರತೀ ಮತಗಟ್ಟಯ ಹೊರಗೆ ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ತಮ್ಮದೇ ಆದ ಬೂತ್ ತೆರೆಯಲು ಅವಕಾಶವಿದ್ದರೂ ಇದಕ್ಕೆ ಕಟ್ಟುನಿಟ್ಟಿನ ನಿಯಮಗಳು ಅನ್ವಯವಾಗುತ್ತವೆ ಎಂದು ಪುತ್ತೂರು ಸಹಾಯಕ ಆಯುಕ್ತರೂ, ಸಹಾಯಕ ಚುನಾವಣಾ ಅಧಿಕಾರಿಗಳೂ ಆಗಿರುವ ಜುಬಿನ್ ಮೊಹಾಪಾತ್ರ ಹೇಳಿದರು.
ಬುಧವಾರ ಈ ಬಗ್ಗೆ ಮಾಹಿತಿ ನೀಡಿದ ಅವರು, ಮತಗಟ್ಟೆಯ ಸುತ್ತ 2೦೦ ಮೀಟರ್ ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆ ಜಾರಿಯಲ್ಲಿರುತ್ತದೆ. ಅದಕ್ಕಿಂತ ಹೊರಗೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ತಮ್ಮ ಬೂತ್ ತೆರೆಯಬಹುದಾಗಿದೆ. ಆದರೆ ಒಂದು ಬೂತ್‌ನಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಇರಬಾರದು. ಇದ್ದಲ್ಲಿ ಚುನಾವಣಾ ಆಯೋಗದ ನಿಯಮ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದವರು ನುಡಿದರು.
10 ಅಡಿ ಅಗಲ ಮತ್ತು 10 ಅಡಿ ಉದ್ದದ ಒಂದು ಪೆಂಡಾಲ್ ಹಾಕಿ ಬೂತ್ ರಚಿಸಿಕೊಳ್ಳಬಹುದು. ಅದರ ಮೇಲೆ ಪಕ್ಷದ ಒಂದು ಧ್ವಜ, ಒಂದು ಬ್ಯಾನರ್ ಅಳವಡಿಸಬಹುದು. ಒಂದು ಟೇಬಲ್ ಹಾಕಿಕೊಂಡು ಇಬ್ಬರು ಮಾತ್ರ ಕೂರಬಹುದು. ಒಂದೇ ಕೇಂದ್ರದಲ್ಲಿ ಒಂದಕ್ಕಿಂತ ಹೆಚ್ಚು ಮತಗಟ್ಟೆಗಳು (ಸೆಕ್ಟರ್ ಬೂತ್) ಇದ್ದ ಸಂದರ್ಭದಲ್ಲೂ ಪಕ್ಷಗಳ ಬೂತ್ ಒಂದಕ್ಕಿAತ ಹೆಚ್ಚು ಇರಬಾರದು. ಅಲ್ಲಿ ಜನ ಗುಂಪುಗೂಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಎಲ್ಲ ಮತದಾನ ಕೇಂದ್ರಗಳಲ್ಲಿ ಏ.26ರಂದು ಮುಂಜಾನೆ 5.3೦ರಿಂದ ಅಣಕು ಮತದಾನ ನಡೆಯುತ್ತದೆ. ಎಲ್ಲ ಪಕ್ಷಗಳ ಪ್ರತಿನಿಧಿಗಳ ಸಮ್ಮುಖ ಅಣಕು ಮತದಾನದ ಮೂಲಕ ಮತಯಂತ್ರಗಳ ಪರಿಶೀಲನೆ ನಡೆಯಲಿದೆ. ಇದಾದ ಬಳಿಕ ಇವಿಎಂ ಅನ್ನು ಮತದಾನಕ್ಕೆ ಸಜ್ಜುಗೊಳಿಸಲಾಗುವುದು. 7 ಗಂಟೆಗೆ ಮತದಾನ ಆರಂಭಗೊಂಡು ಸಂಜೆ 6.3೦ರವರೆಗೆ ನಡೆಯಲಿದೆ. ಅವಧಿ ಮುಗಿಯುವ ಹಂತದಲ್ಲಿ ಮತದಾನ ಕೇಂದ್ರದಲ್ಲಿ ಇದ್ದ ಎಲ್ಲರಿಗೂ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದರು.
ಜಿಲ್ಲಾ ಚುನಾವಣಾ ಅಧಿಕಾರಿಯವರ ಆದೇಶದ ಪ್ರಕಾರ ಪ್ರತೀ ಮತಗಟ್ಟೆಗಳ ಸುತ್ತ 200 ಮೀಟರ್ ವ್ಯಾಪ್ತಿಯನ್ನು ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ ಆ ಪರಿಧಿಯಲ್ಲಿ ಕೆಂಪು ಧ್ವಜ ನೆಡಲಾಗುವುದು. ಅದರೊಳಗಿನ ವ್ಯಾಪ್ತಿಯಲ್ಲಿ ಯಾವುದೇ ಚಟುವಟಿಕೆಗೆ ಅವಕಾಶವಿಲ್ಲ ಎಂದು ಸಹಾಯಕ ಆಯುಕ್ತರು ಹೇಳಿದರು.ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಹನಮ ರೆಡ್ಡಿ, ತಹಸೀಲ್ದಾರ್ ಕುಂಞ ಅಹ್ಮದ್ ಉಪಸ್ಥಿತರಿದ್ದರು