ಪುತ್ತೂರು: ಮಾಜಿ ಶಾಸಕರು ಅಕ್ರಮ ಸಕ್ರಮದಲ್ಲಿ 2 ಲಕ್ಷರೂಪಾಯಿಯನ್ನು 45 ಜನರಿಂದ ಲಂಚ ಪಡೆದಿದ್ದಾರೆ ಎಂದು ಹಾಲಿ ಶಾಸಕರು ಮತ್ತು ಅಧ್ಯಾಪಕನ ಮಗ ಹೇಳಿಕೆ ನೀಡಿದ್ದರು. ಒಬ್ಬ ಜವಾಬ್ದಾರಿಯುತ ಶಾಸಕ ಆ ಮಾಜಿ ಶಾಸಕರು ಯಾರೆಂದು ಖಾತ್ರಿ ಪಡಿಸಲಿ ಮತ್ತು ಆ 45 ಜನ ಯಾರು ಎಂದು ಖಾತ್ರಿ ಪಡಿಸಲಿ. ಅವರನ್ನು ಒಳ್ಳೆಯ ಜಾಗಕ್ಕೆ ಕರೆದುಕೊಂಡು ಬಂದು ನಾವು ಇಂತವರಿಗೆ 2ಲಕ್ಷ ರೂಪಾಯಿ ಕೊಟ್ಟಿದ್ದೇವೆ ಎಂದು ಹೇಳಿದರೆ ಕಂಡಿತಾ ಶಾಸಕರ ದಿಟ್ಟತನವನ್ನು ಬಿಜೆಪಿ ಗೌರವಿಸುತ್ತದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಸವಾಲು ಹಾಕಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ತಮ್ಮ ಅವಧಿಯಲ್ಲಿ ಅಕ್ರಮ ಸಕ್ರಮ ಮತ್ತು 94 ಸಿ ಹಾಗು 94 ಸಿಸಿ ಕುರಿತು ವಿವರವನ್ನು ನೀಡಿದ ಅವರು ಹಾಲಿ ಶಾಸಕರು ಮಾಜಿ ಶಾಸಕರ ವಿರುದ್ಧ 2ಲಕ್ಷದ ಲಂಚ ಆರೋಪ ಹೊರಿಸಿದ್ದಾರೆ. ಅದನ್ನು ಸಾಬೀತು ಪಡಿಸಲಿ. ಯಾವ ಮಾಜಿ ಶಾಸಕ, ಯಾರು 45 ಜನರು ಎಂದು ಹೇಳಿದ ಅವರು ಒಂದು ವೇಳೆ ನನ್ನನ್ನೇ ಹೇಳಿರುವುದಾದರೆ ಆ 45 ಜನರನ್ನು ಒಂದು ಕಡೆ ಕರೆದು ಕೊಂಡು ಬರಲಿ. ನಾನು ಸಹಿತ ಮೂವರು ಆಗಿನ ಅಕ್ರಮ ಸಕ್ರಮ ಸಮಿತಿ ಸದಸ್ಯರಿದ್ದೇವೆ. ನಾವು ಬರುತ್ತೇವೆ. 45 ಜನರು ಬರಲಿ. ಯಾರಿಗೆ ಹಣ ಕೊಟ್ಟಿದ್ದಾರೆಂದು ಹೇಳಲಿ. ಬಹಿರಂಗ ಪಡಿಸಲಿ. ಅವರ ಗೌರವಕ್ಕೆ ತೊಂದರೆ ಆಗುವುದಾದರೆ ಯಾವುದಾದರು ಒಂದು ಕಡೆ ಕೊಠಡಿಗೆ ಕರೆದುಕೊಂಡು ಬರಲಿ ಎಂದು ಸವಾಲು ಹಾಕಿದ್ದಾರೆ. ಬಿಜೆಪಿ ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್, ಮಾಜಿ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಬಲ್ನಾಡು ಗ್ರಾ.ಪಂ ಮಾಜಿ ಅಧ್ಯಕ್ಷರೂ ಮತ್ತು ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯೆ ಪರಮೇಶ್ವರಿ ಭಟ್, ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಪುರುಷೋತ್ತಮ ಮುಂಗ್ಲಿಮನೆ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

























