ಉಪ್ಪಿನಂಗಡಿ : ಇಲ್ಲಿನ ಸಮೀಪದ ಪೆರ್ನೆಯ ಮೈರಕಟ್ಟೆಯಲ್ಲಿ ಇಬ್ಬರು ಮಕ್ಕಳನ್ನು ಬಾವಿಗೆಸೆದು, ಓರ್ವ ಕಂದನ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಆರೋಪಿ ನೂರುನ್ನಿಸಾಗೆ ಪುತ್ತೂರು ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಮೈರಕಟ್ಟೆ ನಿವಾಸಿಗಳಾದ ಸಿನಾನ್ ಹಾಗೂ ಅವರ ಪತ್ನಿ ನೂರುನ್ನಿಸಾ ನಡುವೆ ದೂರವಾಣಿ ಮೂಲಕ ವೈವಾಹಿಕ ಕಲಹ ನಡೆದಿತ್ತು ಎನ್ನಲಾಗಿದೆ. ಇದರಿಂದ ಕೋಪಗೊಂಡ ನೂರುನ್ನಿಸಾ ಮನೆಯಲ್ಲಿದ್ದ ತನ್ನ ಸುಮಾರು ಮೂರುವರೆ ವರ್ಷದ ಹೆಣ್ಣು ಮಗು ಹಾಗೂ ಪತಿಯ ತಂಗಿಯ ಸುಮಾರು ಮೂರು ವರ್ಷದ ಗಂಡು ಮಗುವನ್ನು ಮನೆಯ ಸಮೀಪದ ಬಾವಿಗೆ ಎಸೆದಿದ್ದಾಳೆ ಎಂದು ಆರೋಪಿಸಲಾಗಿದೆ.
ಘಟನೆ ಗಮನಿಸಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಬಾವಿಯಿಂದ ಎರಡೂ ಮಕ್ಕಳನ್ನು ಮೇಲಕ್ಕೆತ್ತಿದ್ದಾರೆ. ಆದರೆ ಈ ವೇಳೆ ನೂರುನ್ನಿಸಾಳ ಪತಿಯ ತಂಗಿಯ ಪುತ್ರ ರಬೀಜ್ ಮೃತಪಟ್ಟಿದ್ದ. ನೂರುನ್ನಿಸಾಳ ಹೆಣ್ಣು ಮಗುವನ್ನು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕೃತ್ಯ ನಡೆದ ಬಳಿಕ ಮನೆಯಲ್ಲಿಯೇ ಇದ್ದ ನೂರುನ್ನಿಸಾಳನ್ನು ಬಂಧಿಸಿದ್ದರು. ಬಳಿಕ ಸೆ. 20ರಂದು ಆರೋಪಿತೆಯನ್ನು ಪುತ್ತೂರು ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.
ವಿಚಾರಣೆ ನಡೆಸಿದ ನ್ಯಾಯಾಧೀಶರು ನೂರುನ್ನಿಸಾಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಪ್ರಕರಣದ ಕುರಿತು ಉಪ್ಪಿನಂಗಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.























