ಪುತ್ತೂರು: ಏಳು ದಿನಗಳ ಕಾಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕಂಗೊಳಿಸಿದ್ದ ಇತಿಹಾಸ ಪ್ರಸಿದ್ಧ ಪುತ್ತೂರು ಕಿಲ್ಲೆ ಮೈದಾನದ 68ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವವು ವೈಭವದಿಂದ ಸಂಪನ್ನಗೊಂಡಿತು.
ಶ್ರೀ ದೇವತಾ ಸಮಿತಿಯ ಆಶ್ರಯದಲ್ಲಿ ನಡೆದ ಉತ್ಸವದ ಸಮಾರೋಪದ ಅಂಗವಾಗಿ ಶ್ರೀ ಮಹಾಗಣಪತಿಯ ವೈಭವದ ಶೋಭಾಯಾತ್ರೆ ನಡೆಯಿತು. ಚೆಂಡೆ, ತಾಸೆ, ಸರ್ವವಾದ್ಯ ಹಾಗೂ ಸ್ಯಾಕ್ಸೋಫೋನ್‌ಗಳ ನಾದದೊಂದಿಗೆ ಸಾಗಿದ ಮೆರವಣಿಗೆಗೆ ವಿವಿಧ ಜನಪದ ಕಲಾ ಪ್ರದರ್ಶನಗಳು ಹಾಗೂ ಭಕ್ತರ ಅಪಾರ ಪಾಲ್ಗೊಳ್ಳುವಿಕೆ ವಿಶೇಷ ಮೆರುಗು ನೀಡಿತು
ರಾತ್ರಿ 9.20ರ ಸುಮಾರಿಗೆ ಸ್ಥಳ ಭೂಮಿಯ ದೈವ ರಕ್ತೇಶ್ವರಿ ಹಾಗೂ ಕಾರೆಕ್ಕಾಡಿನ ಪಂಜುರ್ಲಿ ದೈವದ ಕೋಲ ನಡೆಯಿತು. ಬಳಿಕ ಶ್ರೀ ಮಹಾಗಣಪತಿಗೆ ಮಹಾಪೂಜೆ ನೆರವೇರಿಸಲಾಯಿತು. ಏಳು ದಿನಗಳ ಉತ್ಸವಕ್ಕೆ ಸಮರ್ಪಣಾ ಭಾವದಿಂದ ಸಹಕರಿಸಿದವರಿಗೆ ಶ್ರೀ ದೇವತಾ ಸಮಿತಿ ಅಧ್ಯಕ್ಷರ ವತಿಯಿಂದ ಪ್ರಸಾದ ವಿತರಿಸಲಾಯಿತು.
ಮಹಾಪೂಜೆಯ ಬಳಿಕ ರಾತ್ರಿ 10.42ರ ಸುಮಾರಿಗೆ ಶ್ರೀ ಮಹಾಗಣಪತಿಯ ಶೋಭಾಯಾತ್ರೆ ವೇದಿಕೆಯಿಂದ ಹೊರಟಿತು. 10.48ರ ಸುಮಾರಿಗೆ ಕಿಲ್ಲೆ ಮೈದಾನದ ದ್ವಾರ ದಾಟಿದ ಮೆರವಣಿಗೆಗೆ ಸುಡುಮದ್ದು ಪ್ರದರ್ಶನ ಮತ್ತಷ್ಟು ಮೆರುಗು ನೀಡಿತು.
ಶೋಭಾಯಾತ್ರೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಬೃಹತ್ ಭಾವಚಿತ್ರ ಹೊತ್ತ ವಾಹನ, ತಾಲೀಮು ಪ್ರದರ್ಶನ, ಗೊಂಬೆ ಕುಣಿತ, ಕುಣಿತ ಭಜನೆ ಸೇರಿದಂತೆ ಹಲವು ಕಲಾ ತಂಡಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದವು. ಶ್ರೀ ಮಹಾಗಣಪತಿಯ ಮೂರ್ತಿಯೊಂದಿಗೆ ದೈವಗಳೂ ಶೋಭಾಯಾತ್ರೆಯಲ್ಲಿ ಸಾಗಿದ ದೃಶ್ಯ ಭಕ್ತರ ಗಮನ ಸೆಳೆಯಿತು.
ಮಂಗಳೂರಿನ ಮುನೀಶ್ವರ ವ್ಯಾಯಾಮ ಶಾಲೆಯ ವತಿಯಿಂದ ಕಿಲ್ಲೆ ಮೈದಾನದಲ್ಲಿ ತಾಲೀಮು ಪ್ರದರ್ಶನ ನಡೆಯಿತು. ವಿವಿಧ ಕಸರತ್ತುಗಳ ಮೂಲಕ ನಡೆದ ಶಕ್ತಿಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಶಿಲ್ಪಾ ಗೊಂಬೆ ಬಳಗದ ವತಿಯಿಂದ ತುಳುನಾಡಿನ ಜನಪದ ಸೊಗಡನ್ನು ಬಿಂಬಿಸುವ ಗೊಂಬೆಗಳ ಪ್ರದರ್ಶನವೂ ನಡೆಯಿತು. ಅರವಿಂದ ಬೋಳಾರ್ ಸೇರಿದಂತೆ ತುಳು ನಾಟಕ ಕ್ಷೇತ್ರದ ಕಲಾವಿದರ ಗೊಂಬೆಗಳು ಹಾಗೂ ಮೋಟು-ಪಟ್ಟು ಗೊಂಬೆಗಳು ಗಮನ ಸೆಳೆದವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವೈಭವದ ಶೋಭಾಯಾತ್ರೆಯು ಕೋರ್ಟ್ ರಸ್ತೆ, ದರ್ಬೆ, ಪರ್ಲಡ್ಕ, ತಾಲೂಕು ಆಫೀಸ್ ರಸ್ತೆ, ರಾಧಾಕೃಷ್ಣ ಮಂದಿರ ಹಾಗೂ ಬೊಳುವಾರು ಮಾರ್ಗವಾಗಿ ಸಾಗಿತು. ಬಳಿಕ ಮಂಜಲ್ಪಡು ಕೆರೆಯಲ್ಲಿ ಶ್ರೀ ಗಣೇಶ ವಿಗ್ರಹ ವಿಸರ್ಜನೆ ನೆರವೇರಿಸುವ ಮೂಲಕ ಏಳು ದಿನಗಳ ಮಹಾಗಣೇಶೋತ್ಸವಕ್ಕೆ ವಿಧ್ಯುಕ್ತ ತೆರೆ ಎಳೆಯಲಾಯಿತು.
























