ಪುತ್ತೂರು: ಕೇರಳದ ಕಡೆಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ಪುತ್ತೂರು ಗ್ರಾಮಾಂತರ ಪೊಲೀಸರು ತಡೆದು, 11 ಜಾನುವಾರುಗಳನ್ನು ರಕ್ಷಿಸಿದ್ದಾರೆ.
ಅಕ್ಟೋಬರ್ 5ರಂದು ಬೆಳಗಿನ ಜಾವ ಜಾನುವಾರುಗಳನ್ನು ಅಕ್ರಮವಾಗಿ ಕೇರಳದ ಕಡೆಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸುಷ್ಮಾ ಜಿ. ಭಂಡಾರಿ ಹಾಗೂ ಸಿಬ್ಬಂದಿ ಬಲ್ನಾಡು ಗ್ರಾಮದ ಬಿಳಿಯೂರುಕಟ್ಟೆ ಬಳಿ ಕಾರ್ಯಾಚರಣೆ ನಡೆಸಿ, KA-19-AF-8558 ನೋಂದಣಿಯ ಪಿಕಪ್ ವಾಹನವನ್ನು ತಡೆದಿದ್ದಾರೆ.
ಪೊಲೀಸರು ವಾಹನವನ್ನು ಪರಿಶೀಲಿಸಿದಾಗ, 11 ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿರುವುದು ಪತ್ತೆಯಾಗಿದೆ. ಈ ವೇಳೆ ವಾಹನದ ಚಾಲಕ ಸೇರಿದಂತೆ ವಾಹನದಲ್ಲಿದ್ದ ಮತ್ತೋರ್ವ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಜಾನುವಾರುಗಳನ್ನು ಯಾವುದೇ ಪರವಾನಿಗೆ ಇಲ್ಲದೆ, ಮಾಂಸಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಕೇರಳದ ಕಡೆಗೆ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 125/2026ರಂತೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020ರ ಕಲಂ 4, 6, 7, 12 ಹಾಗೂ Prevention of Cruelty to Animals Actರ ಸೆಕ್ಷನ್ 11(d) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಪ್ರಕರಣದ ತನಿಖೆ ಮುಂದುವರಿಸಿರುವ ಪೊಲೀಸರು, ಅಗತ್ಯ ಪರವಾನಿಗೆ ಇಲ್ಲದೆ ಜಾನುವಾರುಗಳನ್ನು ಮಾರಾಟ ಮಾಡಿದ್ದ ಆರೋಪದ ಮೇಲೆ ಪುತ್ತೂರು ಆರ್ಯಾಪು ನಿವಾಸಿ 52 ವರ್ಷದ ಶಿವಪ್ರಸಾದ್ ಎಂಬಾತನನ್ನು ಬಂಧಿಸಿದ್ದಾರೆ ಇನ್ನು ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
























