ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ನರೇಂದ್ರ ಮೋದಿ ಅವರಿಗೆ 2025ರಲ್ಲಿ 75 ವರ್ಷ ತುಂಬುತ್ತದೆ. ಅದಾದ ಬಳಿಕ ಅವರು ಪ್ರಧಾನಿ ಸ್ಥಾನದಲ್ಲಿ ಇರಲ್ಲ” ಎಂದು ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಅಮಿತ್ ಶಾ , “ನರೇಂದ್ರ ಮೋದಿ ಅವರು ಮೂರನೇ ಅವಧಿಯನ್ನು ಪೂರ್ಣಗೊಳಿಸುತ್ತಾರೆ” ಎಂದಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರಿಗೆ ನಾನೊಂದು ವಿಷಯ ತಿಳಿಸುತ್ತೇನೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುತ್ತಾರೆ ಹಾಗೂ ಮೂರನೇ ಅವಧಿಯನ್ನು ಅವರು ಪೂರ್ಣಗೊಳಿಸುತ್ತಾರೆ. ಇಂಡಿಯಾ ಒಕ್ಕೂಟವೂ ಅಷ್ಟೇ, ಮೋದಿ ಅವರಿಗೆ 75 ವರ್ಷ ತುಂಬುತ್ತದೆ ಎಂಬ ಖುಷಿ ಬೇಡ. 75 ವರ್ಷ ದಾಟಿದ ನಂತರ ಎಲ್ಲೂ ಪ್ರಧಾನಿಯಾಗಬಾರದು ಎಂಬ ನಿಯಮಗಳು ಬಿಜೆಪಿ ಸಂವಿಧಾನದಲ್ಲಿ ಪ್ರಸ್ತಾಪಿಸಿಲ್ಲ. ಹಾಗಾಗಿ, ಮೋದಿ ಅವರು ಮೂರನೇ ಅವಧಿಯನ್ನು ಪೂರ್ಣಗೊಳಿಸುವುದು ನಿಶ್ಚಿತ” ಎಂದು ಹೈದರಾಬಾದ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೈಲಿನಿಂದ ಬಿಡುಗಡೆಯಾದ ಬಳಿಕ ಮೊದಲ ಸುದ್ದಿಗೋಷ್ಠಿ ನಡೆಸಿದ ಕೇಜ್ರಿವಾಲ್, ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಆರೋಪ ಮಾಡಿದರು. “ನರೇಂದ್ರ ಮೋದಿ ಅವರಿಗೆ ಬೇರೆಯವರು ಬೆಳೆಯುವುದು ಇಷ್ಟವಿಲ್ಲ. ದೇಶಕ್ಕೆ ಒಬ್ಬನೇ ನಾಯಕ ಬೇಕು, ಅದು ಅವರೇ ಆಗಿರಬೇಕು. ಈಗಾಗಲೇ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ, ಶಿವರಾಜ್ ಸಿಂಗ್ ಚೌಹಾಣ್, ವಸುಂಧರಾ ರಾಜೆ, ಮನೋಹರ ಲಾಲ್ ಖಟ್ಟರ್, ರಮಣ್ ಸಿಂಗ್ ಸೇರಿ ಹಲವು ನಾಯಕರ ರಾಜಕೀಯ ಜೀವನವನ್ನು ಮೋದಿ ಕೊನೆಗೊಳಿಸಿದ್ದಾರೆ. ಶೀಘ್ರದಲ್ಲೇ, ಯೋಗಿ ಆದಿತ್ಯನಾಥ್ ಅವರ ರಾಜಕೀಯ ಜೀವನವನ್ನೂ ಇವರು ಕೊನೆಗಾಣಿಸಲಿದ್ದಾರೆ” ಎಂದು ದೂರಿದರು.
“ನರೇಂದ್ರ ಮೋದಿ ಅವರೇನಾದರೂ ಮತ್ತೆ ಪ್ರಧಾನಿಯಾದರೆ, ಅಧಿಕಾರ ವಹಿಸಿಕೊಂಡ ಎರಡೇ ತಿಂಗಳಿಗೆ ಯೋಗಿ ಆದಿತ್ಯನಾಥ್ ಅವರ ಬದಲಿಗೆ ಬೇರೆಯವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಲಿದ್ದಾರೆ. ಆದರೆ, ನಮ್ಮ ದೇಶದ ಇತಿಹಾಸವೇ ಬೇರೆ ಇದೆ. ದೇಶದಲ್ಲಿ ಇದುವರೆಗೆ ಯಾರೆಲ್ಲ ಸರ್ವಾಧಿಕಾರ ಮಾಡಲು ಹೊರಟಿದ್ದರೋ, ಅವರನ್ನೆಲ್ಲ ಜನ ಮನೆಗೆ ಕಳುಹಿಸಿದ್ದಾರೆ. ಈಗ ಮತ್ತೆ ಸರ್ವಾಧಿಕಾರಿಗಳು ಪ್ರಜಾಪ್ರಭುತ್ವವನ್ನು ಕೊನೆಗಾಣಿಸಲು ಯತ್ನಿಸುತ್ತಿದ್ದಾರೆ. ಆದರೆ, ದೇಶದ 140 ಕೋಟಿ ಜನ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಎಂಬುದೇ ನನ್ನ ಮನವಿಯಾಗಿದೆ” ಎಂದರು.
“ಒಂದು ದೇಶ, ಒಬ್ಬ ನಾಯಕ ಎಂಬುದು ನರೇಂದ್ರ ಮೋದಿ ಅವರ ಮಿಷನ್ ಆಗಿದೆ. ಅವರೇನಾದರೂ ಮತ್ತೆ ಪ್ರಧಾನಿಯಾದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ಬದಲಿಸಲಿದ್ದಾರೆ” ಎಂದು ಜೈಲಿನಿಂದ ಬಿಡುಗಡೆಯಾದ ಬಳಿಕ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.