ನವದೆಹಲಿ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು ಪಾಕಿಸ್ತಾನದ ಕುರಿತು ನೀಡಿದ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. “ಪಾಕಿಸ್ತಾನದ ಬಳಿ ಅಣುಬಾಂಬ್‌ಗಳು ಇವೆ, ನಾವು ಆ ರಾಷ್ಟ್ರವನ್ನು ಗೌರವಿಸಬೇಕು” ಎಂದು ಮಣಿಶಂಕರ್ ಅಯ್ಯರ್ ನೀಡಿದ ಹೇಳಿಕೆಯಿಂದ ಖುದ್ದು ಕಾಂಗ್ರೆಸ್ ಪಕ್ಷವೇ ಅಂತರ ಕಾಯ್ದುಕೊಂಡಿದೆ. ಇದರ ಬೆನ್ನಲ್ಲೇ, ಮಣಿಶಂಕರ್ ಅಯ್ಯರ್ ಅವರಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ತಿರುಗೇಟು ನೀಡಿದ್ದು, “ನಮ್ಮ ಬಳಿಯ ಅಣುಬಾಂಬ್‌ಗಳು ಫ್ರಿಡ್ಜ್‌ನಲ್ಲಿ ಇಡಲು ತಯಾರಿಸಿದ್ದೇವೆಯೇ” ಎಂದಿದ್ದಾರೆ.
ನಾವೇನೂ ಫ್ರಿಡ್ಜ್‌ನಲ್ಲಿ ಇರಿಸಲು ಅಣುಬಾಂಬ್ ತಯಾರಿಸಿಲ್ಲ. ಇದು ನವ ಭಾರತ. ಹೊಸ ಭಾರತವು ಯಾರ ತಂಟೆಗೂ ಹೋಗುವುದಿಲ್ಲ. ಹಾಗಂತ, ನಮ್ಮ ತಂಟೆಗೆ ಬಂದರೆ ಸುಮ್ಮನೆ ಇರುವುದಿಲ್ಲ. ನಮ್ಮ ತಂಟೆಗೆ ಬಂದವರ ಮನೆಗೆ ನುಗ್ಗಿ ಪ್ರತ್ಯುತ್ತರ ನೀಡುವ ಸಾಮರ್ಥ್ಯ ಹೊಂದಿದ್ದೇವೆ” ಎಂದು ಹೇಳಿದರು.
ಮನೆಗೆ ನುಗ್ಗಿ ಪ್ರತ್ಯುತ್ತರ ನೀಡುವುದನ್ನು ಭಾರತ ಸಾಬೀತುಪಡಿಸಿದೆ. ಇದಕ್ಕೂ ಮೊದಲು ದೇಶದ ಹಲವೆಡೆ ಸ್ಫೋಟಗಳು ಸಂಭವಿಸಿದವು. ಮುಂಬೈ, ಅಯೋಧ್ಯೆ, ದೆಹಲಿ, ಕಾಶಿ, ಲಖನೌ, ವಾರಾಣಸಿ, ಗೋರಖ್‌ಪುರ ಸೇರಿ ಹಲವೆಡೆ ದಾಳಿಗಳು ನಡೆದವು. ದೇಶದ ಸಂಸತ್ ಮೇಲೆಯೇ ದಾಳಿ ನಡೆಯಿತು. ವಿವಿಧ ಸಂದರ್ಭಗಳಲ್ಲಿ ಹಲವು ರೀತಿಯ ದಾಳಿ ನಡೆದವು. ಆದರೆ, ಕಳೆದ 10 ವರ್ಷಗಳಲ್ಲಿ ಉಗ್ರವಾದ, ನಕ್ಸಲ್‌ವಾದವನ್ನು ನಿಗ್ರಹಿಸಲಾಗಿದೆ. ಭಾರತದಲ್ಲಿ ಜೋರಾಗಿ ಪಟಾಕಿ ಸಿಡಿದರೂ, ಇದರ ಹಿಂದೆ ನಮ್ಮ ಕೈವಾಡವಿಲ್ಲ ಎಂದು ಪಾಕಿಸ್ತಾನ ಹೇಳುತ್ತದೆ. ಇದು ಭಾರತದ ತಾಕತ್ತು. ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ಅಂತಹ ಸಾಮರ್ಥ್ಯ ಬೆಳೆಸಿಕೊಂಡಿದೆ” ಎಂದು ತಿಳಿಸಿದರು.