ಮುಂದಿನ ವರ್ಷದ ಆರಂಭದಲ್ಲಿ ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಪ್ರತಿಪಕ್ಷ ಎಸ್ ಪಿ ತನ್ನ ಪ್ರಣಾಳಿಕೆಯನ್ನು ಗುರುವಾರ ಬಿಡುಗಡೆ ಮಾಡಿದ್ದು, ಹಲವು ಬಂಪರ್ ಭರವಸೆಗಳನ್ನು ನೀಡಿದೆ.
ಸಮಾಜವಾದಿ ಪಕ್ಷದ(ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಇಂದು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, 27 ಲಕ್ಷ ಸರ್ಕಾರಿ ಉದ್ಯೋಗ ಭರ್ತಿ ಮತ್ತು ತಿಂಗಳಿಗೆ 5,000 ರೂ. ನಿರುದ್ಯೋಗ ಭತ್ಯೆ ನೀಡುವ ಭರವಸೆ ನೀಡಿದ್ದಾರೆ.
“ಅಚ್ಛೇ ದಿನ್ ಆಯೇ ನಹೀಂ, ಬುರೇ ದಿನ್ ಜಾನೇ ವಾಲೇ ಹೈ (‘ಒಳ್ಳೆಯ ದಿನಗಳು’ ಎಂದಿಗೂ ಬರಲಿಲ್ಲ, ಆದರೆ ಕೆಟ್ಟ ದಿನಗಳು ಕೊನೆಗೊಳ್ಳಲಿವೆ)” ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅಖಿಲೇಶ್ ಯಾದವ್, “ಅಚ್ಛೇ ದಿನ್ ಆಯೇ ವಾಲೇ ಹೈ” (ಒಳ್ಳೆಯ ದಿನಗಳು ಬರಲಿವೆ) ಎಂಬ ಘೋಷಣೆಯನ್ನು ಕೂಗಿದರು.
‘ಜನ್-ಮನ್ ಕಾ ಪ್ರಣಾಳಿಕೆ’ ಮತ್ತು ‘ಪಿಡಿಎ ಕಾ ಪ್ರಾಣ್-ಪತ್ರ’ ಎಂಬ ಶೀರ್ಷಿಕೆಯ ಎಸ್ಪಿ ಪ್ರಣಾಳಿಕೆಯು ಯುವಕರು, ಮಹಿಳೆಯರು, ರೈತರು ಹಾಗೂ ಹಿಂದುಳಿದ ವರ್ಗಗಳ ಮೇಲೆ ಕೇಂದ್ರೀಕೃತವಾಗಿದೆ. ಪಿಡಿಎ ಎಂದರೆ ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರು ಕಡೆಗೆ ಪಕ್ಷದ ಪ್ರಭಾವವನ್ನು ಕೇಂದ್ರೀಕರಿಸಿದೆ.
ಶಿಕ್ಷಣದ ಕುರಿತು, ಪ್ರಣಾಳಿಕೆಯು ಉಚಿತ ಶಾಲಾ ಶಿಕ್ಷಣ ಮತ್ತು ಮುಚ್ಚಲ್ಪಟ್ಟ ಪ್ರಾಥಮಿಕ ಶಾಲೆಗಳ ಪುನರಾರಂಭದ ಭರವಸೆ ನೀಡಲಾಗಿದೆ. ಇದು ರಾಜ್ಯದ ಗುತ್ತಿಗೆ ಶಿಕ್ಷಕರಾದ ಶಿಕ್ಷಾ ಮಿತ್ರರಿಗೆ ವೇತನ ಹೆಚ್ಚಳ ಮತ್ತು ಖಾಯಂ ಉದ್ಯೋಗದ ಭರವಸೆ ನೀಡುತ್ತದೆ. ಇನ್ನು ವೈ-ಫೈ, ಬೀದಿ ದೀಪಗಳು, ವಿದ್ಯುತ್ ಮತ್ತು ಸುಸಜ್ಜಿತ ರಸ್ತೆಗಳನ್ನು ಹೊಂದಿರುವ “ಹೊಸ ಹಳ್ಳಿಗಳು” ಎಂಬ ಭರವಸೆಯನ್ನು ಎಸ್ ಪಿ ನೀಡಿದೆ.
ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆಗೆ ಸಂಬಂಧಿಸಿದ ಬಿರುಕು ಇನ್ನಷ್ಟು ಹೆಚ್ಚಾದಂತಿದೆ. ಮೈತ್ರಿ ಪಕ್ಷವಾದ ಸಮಾಜವಾದಿ ಪಕ್ಷವು ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವುದರ ಬಗ್ಗೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದ್ದು, ಉಭಯ ಪಕ್ಷಗಳ ನಡುವಿನ ಉದ್ವಿಗ್ನತೆ ತೀವ್ರಗೊಂಡಿದೆ.
ಸಮಾಜವಾದಿ ಪಕ್ಷ ಗುರುವಾರ ಮಧ್ಯಾಹ್ನ ರಾಜ್ಯ ರಾಜಧಾನಿಯಲ್ಲಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಆದರೆ, ಈ ಪ್ರಣಾಳಿಕೆಯು ಮೈತ್ರಿಕೂಟವನ್ನು ಪ್ರತಿನಿಧಿಸುವ ಉದ್ದೇಶವನ್ನು ಹೊಂದಿದ್ದರೆ, ಅದನ್ನು ಜಂಟಿಯಾಗಿ ಬಿಡುಗಡೆ ಮಾಡಬೇಕಿತ್ತು ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿ ವಹಿಸಿಕೊಂಡಿರುವ ರಾಜೇಂದ್ರ ಪಾಲ್ ಗೌತಮ್, ಸಮಾಜವಾದಿ ಪಕ್ಷದ ಈ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆ ಮಾತುಕತೆಗಳು ನಡೆಯುತ್ತಿರುವಾಗ, ಪ್ರಣಾಳಿಕೆಯನ್ನು ಬಿಡುಗಡೆ ಮಾಡುವಷ್ಟು ಆತುರ ಏನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.
“ಎರಡು ಪಕ್ಷಗಳ ನಡುವೆ ಮಾತುಕತೆಗಳು ನಡೆಯುತ್ತಿವೆ ಮತ್ತು ಸೀಟು ಹಂಚಿಕೆಯ ಬಗ್ಗೆ ಇನ್ನೂ ಅಂತಿಮ ಚಿತ್ರಣ ಹೊರಬಂದಿಲ್ಲ. ಹೀಗಿರುವಾಗ, ಪ್ರತ್ಯೇಕ ಘೋಷಣೆಗಳನ್ನು ಮಾಡಲು ಅಥವಾ ಸ್ಥಾನಗಳನ್ನು ಪ್ರಕಟಿಸಲು ಇಷ್ಟೊಂದು ಆತುರ ಏನಿತ್ತು? ಎರಡೂ ಪಕ್ಷಗಳು ಪರಸ್ಪರ ಒಪ್ಪಂದದ ಮೂಲಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು,” ಎಂದು ಗೌತಮ್ ಹೇಳಿದರು.
ಇದೇ ವೇಳೆ, ಕಾಂಗ್ರೆಸ್ ಕೂಡ ತನ್ನ ಪ್ರಣಾಳಿಕೆಯನ್ನು ಸಿದ್ಧಪಡಿಸುತ್ತಿದೆ ಎಂದು ಗೌತಮ್ ತಿಳಿಸಿದರು. ರೈತರು, ಯುವಕರು, ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಮಹಿಳೆಯರು ಸೇರಿದಂತೆ ಸಮಾಜದ ವಿವಿಧ ವರ್ಗಗಳೊಂದಿಗೆ ಚರ್ಚೆ ನಡೆಸಿ, ಅವರ ಸಮಸ್ಯೆಗಳನ್ನು ಮತ್ತು ಕಾಳಜಿಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲು ಪಕ್ಷವು ಪ್ರಯತ್ನಿಸಿದೆ ಎಂದು ಅವರು ಹೇಳಿದರು.
























