ರಾಯ್‌ಪುರ: ದೇಶದಲ್ಲಿ ಮತ್ತೆ ಪ್ರಶಸ್ತಿ ವಾಪ್ಸಿ ಅಭಿಯಾನ ಆರಂಭವಾಗಿದೆ. ಛತ್ತೀಸ್‌ಗಢದ ಪ್ರಮುಖ ಆಯುರ್ವೇದ ವೈದ್ಯ ಹೇಮಚಂದ್ ಮಾಂಝಿ ಅವರು ಕಳೆದ ತಿಂಗಳಷ್ಟೇ ಸ್ವೀಕರಿಸಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರಕ್ಕೆ ಹಿಂತಿರುಗಿಸಲು ತೀರ್ಮಾನಿಸಿದ್ದಾರೆ. ಛತ್ತೀಸ್‌ಗಢದ ನಾರಾಯಣಪುರದಲ್ಲಿ ಮಾವೋವಾದಿಗಳು ಅವರಿಗೆ ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂತಿರುಗಿಸಲು ಅವರು ತೀರ್ಮಾನಿಸಿದ್ದಾರೆ.
ನಾರಾಯಣಪುರ ಜಿಲ್ಲೆಯ ಛೋಟೆಡೊಂಗರ್ ಗ್ರಾಮದವರಾದ ಹೇಮಚಂದ್ ಮಾಂಝಿ ಅವರು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಔಷಧ ಪದ್ಧತಿ ಆಯುರ್ವೇದ, ಸಿದ್ಧ, ಹೋಮಿಯೋಪತಿ, ಯುನಾನಿ ಮೂಲಕ ಜನರ ರೋಗಗಳನ್ನು ನಿವಾರಣೆ ಮಾಡಿದ್ದಾರೆ. ಇವರ ಸಮಾಜ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ಘೋಷಿಸಿತ್ತು. ಕಳೆದ ಏಪ್ರಿಲ್‌ನಲ್ಲಿಯೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೇಮಚಂದ್ ಮಾಂಝಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು. ಆದರೀಗ, ಒಂದೇ ತಿಂಗಳಲ್ಲಿ ಹೇಮಚಂದ್ ಮಾಂಝಿ ಅವರು ಪ್ರಶಸ್ತಿ ಹಿಂತಿರುಗಿಸುವುದಾಗಿ ಘೋಷಿಸಿದ್ದಾರೆ.